ಮೈಸೂರು: ದಸರಾ ಸಾಂಪ್ರದಾಯಿಕ ಹಬ್ಬವಾಗಿದ್ದು, ಅದಕ್ಕೆ ವಿಶಿಷ್ಟ ಸಂಪ್ರದಾಯವಿದೆ. ಅದೇ ರೀತಿ ಕರಾವಳಿ ಭಾಗದ ಕಂಬಳಕ್ಕೂ ವೈಶಿಷ್ಟೃ ಇದೆ. ಆದ್ದರಿಂದ ದಸರಾದಲ್ಲಿ ಕಂಬಳ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯಿಸಿದರು.
ದಸರಾದಲ್ಲಿ ಕಂಬ ಜೋಡಣೆ ಮಾಡುವುದರಿಂದ ಕಂಬಳಕ್ಕೆ ಸಿಗಬೇಕಾದ ಮಹತ್ವ ಸಿಗದಿರಬಹುದು. ಕಂಬಳ ಮಾಡಲೇ ಬೇಕು ಎನ್ನುವುದಾದರೆ ಅದನ್ನು ಬೇರೆ ದಿನಗಳಲ್ಲಿ ಪ್ರತ್ಯೇಕವಾಗಿ ನಡೆಸುವ ಮೂಲಕ ಅದರ ಮಹತ್ವವನ್ನು ತಿಳಿಸಬಹುದು. ದಸರಾಕ್ಕೆ ಇಲ್ಲಿ ಮಹತ್ವ ನೀಡಬೇಕಾಗಿರುವುದರಿಂದ ಕಂಬಳಕ್ಕೆ ಹೆಚ್ಚಿನ ಪ್ರಾಮಖ್ಯತೆ ಇಲ್ಲದೆ ಇರಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಸರಾ ಮುಗಿದ ಮೇಲೆ ಕಂಬಳೋತ್ಸವ ಮಾಡಬಹುದಿತ್ತು. ಕೇರಳದಲ್ಲಿ ಓಣಂ ಮಾಡುತ್ತಾರೆ. ಮಂಗಳೂರಿನಲ್ಲಿ ಮತ್ತೊಂದು ಉತ್ಸವ ಮಾಡುತ್ತಾರೆ. ಆ ಉತ್ಸವದ ವೇಳೆ ಆನೆಗೆ ಅಂಬಾರಿ ಕಟ್ಟಿ ಮೆರವಣಿಗೆ ಮಾಡುತ್ತೇನೆ ಎಂದರೆ ಚೆನ್ನಾಗಿರುತ್ತಾ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಕಂಬಳದ ಬಗ್ಗೆ ನನ್ನ ಅಭಿಪ್ರಾಯ ಕೇಳಿಲ್ಲ. ಅಭಿಪ್ರಾಯ ಕೇಳಿದರೆ ಇದನ್ನೇ ಹೇಳುತ್ತೇನೆ. ಸರ್ಕಾರ ಕೇಳದೆ ನಾನು ಹೇಗೆ ಅಭಿಪ್ರಾಯ ತಿಳಿಸಲಿ ಎಂದರು.
ದಸರಾ ಎಂದರೆ ಅದು ಅದ್ದೂರಿತನ, ಸಂಪ್ರಾಯದಿಂದ ಕೂಡಿದ್ದು. ಹೆಚ್ಚಾಗಿ ಮಳೆ ಆದರೆ ಅದರಿಂದ ಅನಾಹುತ ಆಗದಂತೆ ಕಾಪಾಡಲು, ಮಳೆ ಆಗದಿದ್ದರೆ ಉತ್ತಮ ಮಳೆ ಆಗಿ ರೈತರನ್ನು ಸಲಹುವಂತೆ ಕೋರುವುದು ದಸರಾದ ಉದ್ದೇಶ. ಹಾಗಾಗಿ ಮಳೆ ಇಲ್ಲದ ದಿನಗಳಲ್ಲಿ ದಸರಾ ಅದ್ದೂರಿ, ಸರಳ ಎನ್ನುವ ಪ್ರಶ್ನೆ ಬರುವುದಿಲ್ಲ. ಎಷ್ಟೇ ಸರಳ ಮಾಡಿದರೆ ಏನು ಆಚರಣೆ, ಸಂಪ್ರದಾಯ ಇವೆಯೋ ಅವುಗಳನ್ನು ಮಾಡಲೇ ಬೇಕಲ್ಲ ಎಂದು ಹೇಳಿದರು.
ದಸರಾಗೆ ಎಲ್ಲರನ್ನೂ ಕರೆಯಬೇಕು. ಮನೆಯ ಹಬ್ಬ. ನಮಗೆ ಎಲ್ಲರೂ ಬೇಕು. ಆದ್ದರಿಂದ ಅಕ್ಕ, ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯುವುದರಲ್ಲಿ ತಪ್ಪಿಲ್ಲ. ಅರಮನೆ ಒಳಗೆ ರಾಜಮನೆತನದ ಆಚರಣೆಗಳು ಜರುಗಲಿದ್ದು, ಹೊರಗೆ ಸರ್ಕಾರದ ಆಚರಣೆ ಮಾಡುತ್ತದೆ. ಆದ್ದರಿಂದ ಹೀಗೆ ಮಾಡಬೇಕು ಎಂದು ನಾವು ಹೇಳಲು ಬರುವುದಿಲ್ಲ. ಅದು ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು, ನಮ್ಮನ್ನು ಸಲಹೆ ಕೇಳಿದರೆ ನೀಡಬಹುದು ಎಂದು ಉತ್ತರಿಸಿದರು.
ಚಾಮುಂಡಿ ಬೆಟ್ಟವಾಗಿಯೇ ಉಳಿಸೋಣ
ಚಾಮುಂಡಿ ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಬೇಕಿದೆ. ಅದನ್ನು ಊರು ಮಾಡುವುದು ಬೇಡ. ಈಗಾಗಲೇ ಸಾಕಷ್ಟು ಕಟ್ಟಡಗಳು ತಲೆ ಎತ್ತಿದ್ದು, ಸಾಕಷ್ಟು ಒತ್ತಡ ಬೀಳುತ್ತಿದೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.
ಪಾರ್ಕಿಂಗ್‌ಗಾಗಿ ನಿರ್ಮಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬಂಡೆಗಳನ್ನು ಸಿಡಿಸಿದ್ದರಿಂದ ರಾಜವಿಲಾಸದ ಒಂದು ಭಾಗ ಕುಸಿದಿದೆ. ಅಲ್ಲದೆ, ಗೋಪುರಗಳು ಬಿರುಕುಬಿಟ್ಟು ಒಂದೂವರೆ ವರ್ಷಗಳ ಕಾಲ ಕಾಮಗಾರಿ ನಡೆಸಲಾಗಿದೆ. ಈ ಸಮಯದಲ್ಲಿ ಗೋಪುರಗಳು ಓಲಾಡುತ್ತಿದ್ದು, ಕಾರ್ಮಿಕರು ಜೀವ ಹಿಡಿದು ಕೆಲಸ ಮಾಡಿದ್ದಾರೆ. ಕಾಮಗಾರಿ ಮುಗಿಯುವವರೆಗೂ ಜೀವ ಕೈಯಲ್ಲಿ ಹಿಡಿದಂತಾಗಿತ್ತು. ಇದೆಲ್ಲ ಯಾರ ಬಳಿ ಹೇಳೋದು ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಳೆಯ ಹಾಗೂ ಈಗಿನ ಚಾಮುಂಡಿಬೆಟ್ಟದ ಸ್ಥಿತಿಗತಿಯನ್ನು ಫೋಟೋ ಸಹಿತ ಮುಂದಿನ ದಿನಗಳಲ್ಲಿ ಜನರ ಮುಂದಿಡಲಾಗುವುದು ಎಂದು ಹೇಳಿದರು.
ಕುರುಬಾರಹಳ್ಳಿ ಸರ್ವೇ ನಂಬರ್ ಸೇರಿದಂತೆ ನಾವು ಈಗಾಗಲೇ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಧ್ಯವರ್ತಿಗಳ ಮಾತಿಗೆ ಮನ್ನಣೆ ನೀಡದೆ ಜನರು ಎಚ್ಚರದಿಂದ ಇರಬೇಕು. ರಾಜ ಮನೆತನದ ಲೆಕ್ಕಕ್ಕೆ ಸಿಗದಷ್ಟು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ. ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದ್ದರೂ ಸರ್ಕಾರ ಅದನ್ನು ಪಾಲಿಸಿಲ್ಲ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಬದುಕಿದ್ದಾಗ ಎಷ್ಟು ಕೇಸ್ ಇದ್ದವೋ ಈಗಲೂ ಅಷ್ಟೆ ಇವೆ ಎಂದರು.