ಮೈಸೂರು: ರಾಜಮನೆತನವನ್ನು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಶುಕ್ರವಾರ ಜಿಲ್ಲಾಡಳಿತದಿಂದ ಔಪಚಾರಿಕವಾಗಿ ಆಹ್ವಾನಿಸಲಾಯಿತು.
ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು ಅರಮನೆಗೆ ಭೇಟಿ ನೀಡಿ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ರಾಜಮನೆತನದ ಕುಟುಂಬದವರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಗೌರವಪೂರ್ವಕವಾಗಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.
ನಂತರ ಮಾತನಾಡಿದ ಸಚಿವರು, ಪ್ರತಿ ಬಾರಿಯಂತೆ ಈ ಸಲವೂ ರಾಜಮನೆತನದವರಿಗೆ ದಸರಾ ಮಹೋತ್ಸವಕ್ಕೆ ಔಪಚಾರಿಕವಾಗಿ ಆಹ್ವಾನ ನೀಡಲಾಗಿದೆ. ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು
ಅಂಬಾರಿ ಕಟ್ಟುವ ಸಮಯದಲ್ಲಿ ಕಳೆದ ಬಾರಿ ಹೆಚ್ಚಿನ ಜನಸಂದಣಿಯಿಂದ ವಿಳಂಬವಾಗಿತ್ತು. ಈ ಬಾರಿ ಅಂಬಾರಿ ಕಟ್ಟುವ ಜಾಗದಲ್ಲಿ ಕಡಿಮೆ ಜನರಿಗೆ ಅವಕಾಶ ನೀಡಿ ಸುಸೂತ್ರವಾಗಿ ಕೆಲಸ ನಡೆಯುವಂತೆ ಸೂಕ್ತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ , ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಸಿಂಧು ಇತರರು ಇದ್ದರು.