ದಸರಾ ಅಂಗವಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದ ದೃಶ್ಯಾವಳಿ. Crowds flock to Dasara Food Mela
ಮೈಸೂರು

ದಸರಾ ಆಹಾರ ಮೇಳಕ್ಕೆ ಜನರ ಲಗ್ಗೆ

ಮೇಳದಲ್ಲಿ ನೆಚ್ಚಿನ ಖಾದ್ಯದ ಸವಿ ಭಾನುವಾರವರೆಗೆ ತೆರೆದಿರಲಿದೆ ಫುಡ್ ಫೆಸ್ಟ್ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ ಉಪಸಮಿತಿಯ ವಿಶೇಷಾಧಿಕಾರಿ ವೀಣಾ ಮಾಹಿತಿ

ಮೈಸೂರು: ದಸರಾ ಮುಗಿದ ಬಳಿಕ ಆಹಾರ ಮೇಳಕ್ಕೆ ಸಾರ್ವಜನಿಕರು ಮುಗಿಬೀಳುತ್ತಿದ್ದು, ಇದು ಇನ್ನೂ ಅ.25ರವರೆಗೆ ತೆರೆದಿರಲಿದೆ.

ಬುಧವಾರ ಜಂಬೂ ಸವಾರಿ ಮೆರವಣಿಗೆಯೊಂದಿಗೆ ದಸರಾ ಮಹೋತ್ಸವ ಸಂಪನ್ನಗೊಂಡಿದೆ. ನಾಡಹಬ್ಬ ಅಂಗವಾಗಿ ಆಯೋಜಿಸಿರುವ ಬಹುತೇಕ ಕಾರ್ಯಕ್ರಮಗಳು ಮುಕ್ತಾಯಗೊಂಡಿವೆ. ಈ ನಡುವೆ, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳ ಮುಂದುವರಿದಿದ್ದು, ಸಾರ್ವಜನಿಕರು ಲಗ್ಗೆ ಇಡುವ ಮೂಲಕ ನೆಚ್ಚಿನ ಖಾದ್ಯ ಸವಿದು ಸಂಭ್ರಮಿಸುತ್ತಿದ್ದಾರೆ.

ಪ್ರತಿ ವರ್ಷ ಜಂಬೂ ಸವಾರಿ ಮುಗಿದ ಬಳಿಕ ಆಹಾರ ಮೇಳದ ಅವಧಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಲ ಅ.11ರಿಂದ 25ವರೆಗೆ ಕೈಗೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅನುಕೂಲವಾಗಿದೆ. ಇನ್ನೂ ಬಹಳಷ್ಟು ಪ್ರವಾಸಿಗರು ಮೈಸೂರು ನಗರದಲ್ಲೇ ನೆಲೆಸಿದ್ದಾರೆ. ಅವರಿಗೆ ದಸರಾ ಸವಿಯಲು ಆಹಾರ ಮೇಳ ಸಹ ವೇದಿಕೆಯಾಗುತ್ತಿದೆ ಎಂದು ಆಹಾರ ಮೇಳದ ಉಪಸಮಿತಿಯ ವಿಶೇಷಾಧಿಕಾರಿ ವೀಣಾ ತಿಳಿಸಿದರು.

ತರಹೇವಾರಿ ಖಾದ್ಯಗಳು:

ಆಹಾರ ಮೇಳದಲ್ಲಿ ದಕ್ಷಿಣ ಮತ್ತು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿ, ಭಾರತದ ವಿವಿಧ ರಾಜ್ಯಗಳ ಖಾದ್ಯಗಳು ದೊರೆಯುತ್ತಿವೆ. ಜತೆಗೆ, ಅಂತಾರಾಷ್ಟ್ರೀಯ ಮಟ್ಟದ ಚೈನೀಸ್, ಇಟಾಲಿಯನ್, ಫ್ರೆಂಚ್, ಟಿಬೆಟಿಯನ್, ಆಫ್ರಿಕನ್ ಪದ್ಧತಿಯ ಆಹಾರ ಪದಾರ್ಥಗಳು ಒಂದೇ ಸೂರಿನಡಿ ಲಭ್ಯವಾಗುತ್ತಿದೆ.

ಆಧುನಿಕ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯುವ ಸಲುವಾಗಿ ಈ ಬಾರಿಯ ಮೇಳದಲ್ಲಿ ನೈಸರ್ಗಿಕ, ಸಾವಯವ ಕೃಷಿ ಉತ್ಪನ್ನಗಳು, ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳಿಗೆ ಆದ್ಯತೆ ಕೊಡಲಾಗಿದೆ. ಸಿರಿಧಾನ್ಯ ಬೆಳೆಗಾರರು, ಸಾವಯವ ಕೃಷಿಕರು, ಹಣ್ಣು-ತರಕಾರಿ ಮಾರಾಟಗಾರರು, ರೈತ ಒಕ್ಕೂಟಗಳು ತಮ್ಮ ಉತ್ಪನ್ನ, ಅಡುಗೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದಾರೆ. ಸಂಜೆಯಾಗುತ್ತಲೇ ಆಹಾರ ಮೇಳದತ್ತ ಲಗ್ಗೆ ಇಟ್ಟ ಜನರು ಕುಟುಂಬಸಹಿತ, ಸ್ನೇಹಿತರ ಸಹಿತ ಕಾಲ ಕಳೆಯುತ್ತಿದ್ದಾರೆ.

ಪಾನಿಪುರಿ, ಗೋಬಿ ಸೇರಿದಂತೆ ಇನ್ನಿತರ ಚಾಟ್ಸ್‌ಗಳನ್ನು ಬಾಯಿಚಪ್ಪರಿಸಿ ತಿನ್ನುತ್ತಿದ್ದಾರೆ. ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜತೆಗೆ ಗುಜರಾತಿ, ಹೈದರಾಬಾದಿ, ಕೇರಳದ ಆಹಾರಕ್ಕೂ ಜನರು ಕೇಳಿ ಪಡೆದುಕೊಳ್ಳುತ್ತಿದ್ದಾರೆ.

ವೈವಿಧ್ಯಮಯ ಆಹಾರ ಪದಾರ್ಥಗಳಿಗೆ ಜನ ಸಮೂಹ ಮಾರುಹೋಗಿದ್ದಾರೆ. ತಿಂಡಿ ತಿನಿಸುಗಳ ಮಳಿಗೆಗಳ ಮುಂದೆ ಆಹಾರ ಪಟ್ಟಿ ಹಿಡಿದು ರುಚಿ ಆಸ್ವಾದಿಸುತ್ತಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಶೈಲಿ ಸೇರಿದಂತೆ ಇನ್ನಿತರ ಭಾಗದ ತಿನಿಸುಗಳು ಹೆಚ್ಚು ಬಿಕರಿಯಾಗುತ್ತಿವೆ.

ಎಲ್ಲ ಖಾದ್ಯಗಳನ್ನು ನಿರ್ದಿಷ್ಟ ಬೆಲೆಗೆ ಮಾರಲು ಸೂಚಿಸಲಾಗಿದೆ. ಆದಾಗ್ಯೂ, ಕೆಲ ಮಾರಾಟಗಾರರು, ಹೆಚ್ಚಿನ ಬೆಲೆ ನಿಗದಿ ಪಡಿಸಿ ಗ್ರಾಹಕರಿಂದ ಸುಲಿಗೆ ಮಾಡಲಾಗಿದೆ. ಹೊರಗಡೆಗಿಂತ ಇಲ್ಲಿ ಬೆಲೆ ದುಬಾರಿಯಾಗಿದೆ ಎಂಬ ಆರೋಪ ಸಾಮಾನ್ಯವಾಗಿದೆ.

ನಾನ್ ವೆಜ್ ಆಹಾರಕ್ಕೆ ಹೆಚ್ಚಿನ ಬೇಡಿಕೆ

ನಾನ್ ವೆಜ್ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ. ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ, ನಾಟಿ ಕೋಳಿ ಸಾಂಬಾರ್, ಏಡಿ ಫ್ರೈ, ಬಿದರಕ್ಕಿ ಪಾಯಸ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸಮುದ್ರ ಮೀನಿನಿಂದ ತಯಾರಿಸಿದ ಕಬಾಬ್, ಫಿಶ್ ಫ್ರೈ, ತವಾ ಫ್ರೈ, ಚಿಕನ್ ರೋಲ್, ಚಿಕನ್ ಬಿರಿಯಾನಿ, ಜ್ಯೂಸಿ ಚಿಕನ್ ಬರ್ಗರ್, ಚಿಕನ್ ಪಿಜ್ಜಾ, ಗ್ರಿಲ್ ಸ್ಯಾಂಡ್‌ವಿಚ್, ಚೀಸ್ ಸ್ಯಾಂಡ್ ವಿಚ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಮಟನ್ ಚಾಪ್ಸ್, ಮಿರ್ಚಿ ಚಿಕನ್ ಪಲಾವ್, ನಾಟಿ ಕೋಳಿ ಮಡಿಕೆ ಬಿರಿಯಾನಿ, ದೊನ್ನೆ ಬಿರಿಯಾನಿ ಸೇರಿದಂತೆ ಇನ್ನಿತರ ತಿನಿಸುಗಳು ಬಾಯಿಯಲ್ಲಿ ನೀರು ತರಿಸುತ್ತಿದೆ.

ಸಸ್ಯಾಹಾರಿ ತಿನಿಸುಗಳೂ ಇಲ್ಲಿವೆ. ಉತ್ತರಕರ್ನಾಟಕ ಭಾಗದ ಜೋಳದ ರೊಟ್ಟಿ, ಎಣ್ಣೆಗಾಯಿ, ಗಿರ್ಮಿಟ್, ಮಿರ್ಚಿ ಬಜ್ಜಿ, ಪುಳಿಯೋಗರೆ, ಬೆಣ್ಣೆ ದೋಸೆ, ರೋಟಿ, ಮಶ್ರೂಮ್ ಬಿರಿಯಾನಿ, ಪಾನಿಪುರಿ, ಜೋಳದ ರೊಟ್ಟಿ, ಅವಲಕ್ಕಿ ಗಿಣ್ಣು, ಅವಲಕ್ಕಿ ಪಾಯಸ, ಕ್ಯಾರೆಟ್ ಹಲ್ವಾ, ಸಿಹಿ ಪೊಂಗಲ್, ಖಾರ ಪೊಂಗಲ್, ವಡಾಪಾವ್, ಪಾವ್ ಬಾಜಿ, ಡ್ರೈ ಗೋಬಿ, ಡ್ರೈ ಮಶ್ರೂಮ್, ಬಜ್ಜಿ, ಪಕೋಡ, ಮಶ್ರೂಮ್ ಗೋಬಿ, ಮಶ್ರೂಮ್ ಚಿಲ್ಲಿ, ಪಡ್ಡು ಶೇಂಗಾ ಚಟ್ನಿ, ಸೌತೆಕಾಯಿ ರೊಟ್ಟಿ, ಮಸಾಲೆ ಕಡುಬು, ಬೆಣ್ಣೆಪಡ್ಡು, ನುಗ್ಗೆಕಾಯಿ ಸೂಪ್, ಪಾಶ್ಚಿಮಾತ್ಯ ಶೈಲಿಯ ಬ್ರೌನಿ, ಚಾಕಲೇಟ್, ನೌಟೆಲ್ಲ, ಡೊನಟ್ ಬಾಂಬುಲೋನಿ, ಚೀಸ್ ಕೇಕ್, ಬ್ರೆಡ್, ಪೇಸ್ಟ್ರೀಸ್ ರುಚಿಯನ್ನು ಜನರು ಆಸ್ವಾದಿಸುತ್ತಿದ್ದಾರೆ.