ನಗರದ ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗುರುಪ್ರಸಾದ್ ಕೆರಗೋಡು, ಬಿ.ಮಹೇಶ್ ಹರವೆ, ಕುಮಾರಸ್ವಾಮಿ ಕೂಡ್ಲಾಪುರ, ಚಂದ್ರಗುಪ್ತ, ಕೆ. ನರಸಿಂಹಮೂರ್ತಿ, ಎನ್. ವೆಂಕಟೇಶ್, ಬೆಟ್ಟಯ್ಯ ಕೋಟೆ, ಕೆ.ಎನ್. ಶಿವಲಿಂಗಯ್ಯ ಇದ್ದರು. 
ಮೈಸೂರು

ದಲಿತರಲ್ಲಿ ಸಾಕ್ಷರತೆ ಹೆಚ್ಚಲು ಚಳವಳಿಗಳು ಕಾರಣ

ಗುರುಪ್ರಸಾದ್ ಕೆರಗೋಡು ಅಭಿಪ್ರಾಯ ಮಾತು-ಸಂವಾದ ಕಾರ್ಯಕ್ರಮ

ದಲಿತರಲ್ಲಿ ಸಾಕ್ಷರತೆ ಹೆಚ್ಚಲು ದಲಿತ ಚಳವಳಿಯ ಹೋರಾಟಗಳು ಪ್ರಮುಖ ಕಾರಣವಾಗಿವೆ. ಇಂದು ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಬಣಗಳಿದ್ದರೂ ಅಂಬೇಡ್ಕರ್ ಅವರ ವಿಚಾರಧಾರೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.

ನಗರದ ಕಿರುರಂಗಮಂದಿರದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ, ಒಡಲು ಟ್ರಸ್ಟ್ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ದಲಿತ ಚಳವಳಿಯ ಹೋರಾಟಗಾರ ಸಿ.ಎಂ.ಮುನಿಯಪ್ಪ ಹಸಾಳ ಅವರ ‘ಕಾಲಡಿಯ ಕಣ್ಣು’ ಕೃತಿ ಕುರಿತು ಆಯೋಜಿಸಿದ್ದ ಮಾತು-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರ ಹಿತಾಸಕ್ತಿಗೆ ಧಕ್ಕೆಯಾದಾಗ ಎಲ್ಲ ಬಣಗಳೂ ಒಂದಾಗಿ ಹೋರಾಟಕ್ಕೆ ಇಳಿಯುತ್ತವೆ ಎಂದರು.

ದಲಿತರಿಗೆ ನ್ಯಾಯ ದೊರಕಿಸಿಕೊಡುವ ಶಕ್ತಿ ಚಳವಳಿಗೆ ಇಂದಿಗೂ ಇದೆ. ಕಾರ್ಮಿಕರು, ವಿವಿಧ ಸಮುದಾಯಗಳ ಕಾರ್ಯಕರ್ತರು ಹಾಗೂ ಹಿರಿಯ ಹೋರಾಟಗಾರರ ಮಾರ್ಗದರ್ಶನದೊಂದಿಗೆ ಎಲ್ಲ ಶಕ್ತಿಗಳನ್ನು ಒಗ್ಗೂಡಿಸಿ ಮುಂದಿನ ಹೋರಾಟಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

‘ಕಾಲಡಿಯ ಕಣ್ಣು’ ಕೃತಿ ದಲಿತ ಚಳವಳಿಯ ಹೋರಾಟ, ಸಂಘರ್ಷ ಮತ್ತು ಅನುಭವಗಳನ್ನು ದಾಖಲಿಸಿರುವ ಸಾಮೂಹಿಕ ಆತ್ಮಕಥನವಾಗಿದೆ. ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು ಈ ಕೃತಿಯನ್ನು ಓದಿದಾಗ ತಮ್ಮ ಬದುಕಿನ ಅನೇಕ ಘಟನೆಗಳು ನೆನಪಾಗುತ್ತವೆ. ಲೇಖಕರು ದಾಖಲಿಸಿರುವ ಊರು, ಪರಿಸರ ಮತ್ತು ಹೋರಾಟದ ಅನುಭವಗಳು ಓದುಗರ ಸ್ವಂತ ಬದುಕಿನ ಪ್ರತಿಬಿಂಬದಂತೆ ಕಾಣುತ್ತವೆ. ದಲಿತ ಚಳವಳಿಯ ಇತಿಹಾಸ ಅರಿಯಲು ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.

ಕೃತಿಯಲ್ಲಿ ಈಗಾಗಲೇ ದಾಖಲಾಗಿರುವ ಹೋರಾಟಗಳ ಜತೆಗೆ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಅನೇಕ ಸಂಘರ್ಷ ಮತ್ತು ಅನುಭವಗಳನ್ನೂ ಗುರುತಿಸಲು ಸಾಧ್ಯವಾಗಿದೆ. ಪ್ರತಿಯೊಬ್ಬ ಹೋರಾಟಗಾರರೂ ತಮ್ಮ ಅನುಭವಗಳನ್ನು ದಾಖಲಿಸಿದಾಗ ದಲಿತ ಚಳವಳಿಯ ಸಮಗ್ರ ಇತಿಹಾಸ ನಿರ್ಮಾಣವಾಗಲಿದೆ. ಆಗ ವೈಯಕ್ತಿಕ ಆತ್ಮಕಥನಗಳು ಸಾಮೂಹಿಕ ಚಳವಳಿಯ ಇತಿಹಾಸವಾಗಿ ರೂಪುಗೊಳ್ಳಲಿವೆ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತಿ ಚಿಂತಕ ಬಿ. ಮಹೇಶ್ ಹರವೆ ಮಾತನಾಡಿ, ಕಾಲಡಿಯ ಕಣ್ಣು ಕೃತಿ ಕಳೆದ ಐದು ದಶಕಗಳ ದಲಿತ ಚಳವಳಿಯ ಹಾದಿ, ಹೋರಾಟ ಮತ್ತು ಅನುಭವಗಳನ್ನು ಪರಿಚಯಿಸುತ್ತದೆ. ಹಿರಿಯ ಹೋರಾಟಗಾರರ ಅನುಭವಗಳು ಮುಂದಿನ ಪೀಳಿಗೆಗೆ ಮಹತ್ವದ ಪಾಠಗಳಾಗಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದ ದಲಿತ ಚಳವಳಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ದೃಷ್ಟಿಯಿಂದ ದಲಿತ ಚಳವಳಿಗಳೇ ಒಂದು ವಿಶ್ವವಿದ್ಯಾಲಯವಿದ್ದಂತೆ ಎಂದರು.

ಕಾರ್ಯಕ್ರಮದಲ್ಲಿ ಒಡಲು ಟ್ರಸ್ಟ್ ಅಧ್ಯಕ್ಷ ಕುಮಾರಸ್ವಾಮಿ ಕೂಡ್ಲಾಪುರ, ದಲಿತ ಸಾಹಿತ್ಯ ಪರಿಷತ್ ಸಂಯೋಜಕ ಚಂದ್ರಗುಪ್ತ, ಪತ್ರಕರ್ತ ಕೆ. ನರಸಿಂಹಮೂರ್ತಿ, ಎನ್. ವೆಂಕಟೇಶ್, ಬೆಟ್ಟಯ್ಯ ಕೋಟೆ ಹಾಗೂ ಕೆ.ಎನ್.ಶಿವಲಿಂಗಯ್ಯ ಉಪಸ್ಥಿತರಿದ್ದರು.