ತಿ.ನರಸೀಪುರ ಪಟ್ಟಣದ ಖಾಸಗಿ ಬಸ್‌ಸ್ಟ್ಯಾಂಡ್ ಸರ್ಕಲ್‌ನಲ್ಲಿ ನೀಲಿ ಶಾಲಿನ ಹೇಳಿಕೆ ಖಂಡಿಸಿ ದಸಂಸ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಹಾಗೂ ಕಾರ್ಯಕರ್ತರು. 
ಮೈಸೂರು

ಮಾಜಿ ಸಂಸದ ಪ್ರತಾಪ್ ಸಿಂಹ ಬಂಧಿಸಿರಿ

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ತಿ.ನರಸೀಪುರ: ನೀಲಿ ಶಾಲಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಖಂಡಿಸಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರತಾಪ್‌ಸಿಂಹ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.

ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಎಸ್.ಚಂದ್ರಶೇಖರ್ ಮಾತನಾಡಿ, ಪ್ರತಾಪ್ ಸಿಂಹ ಅವರ ಹೇಳಿಕೆ ಆಕ್ಷೇಪಾರ್ಹವಾಗಿದ್ದು, ಸಮಾಜದ ಸೌಹಾರ್ದತೆ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಹೇಳಿದರು.

ಪ್ರತಾಪ್ ಸಿಂಹ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ ಎಂದು ಆರೋಪಿಸಿದ ಅವರು, ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿ, ಪ್ರತಾಪ್ ಸಿಂಹ ಅವರ ಹೇಳಿಕೆಗಳು ಹಾಗೂ ಕೋಮು ಸಾಮರಸ್ಯಕ್ಕೆ ಭಂಗ ತರುವಂತಹ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದರು. ಅವರ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಹೇಳಿದ ಅವರು, ಇಷ್ಟೆಲ್ಲ ಪ್ರಕರಣಗಳಿದ್ದರೂ ಬಂಧನವಾಗದಿರುವುದು ಏಕೆ? ಎಂದು ಪ್ರಶ್ನಿಸಿದರು.

ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕೆಂಪಯ್ಯನಹುಂಡಿ ಆರ್.ರಾಜು, ಆಲಗೂಡು ಶಿವಣ್ಣ, ಜಿಲ್ಲಾ ಸಂಚಾಲಕ ಕನ್ನನಾಯಕನಹಳ್ಳಿ ಮರಿಸ್ವಾಮಿ, ಕೆಬ್ಬೆಹುಂಡಿ ಲಿಂಗರಾಜು, ಆಲಗೂಡು ನಂದನ್, ತ್ರಿವೇಣಿ ಮಹದೇವಮ್ಮ, ಸಹ ಸಂಚಾಲಕರಾದ ಕೊಳತ್ತೂರು ಪ್ರಭಾಕರ್, ನೆರಗ್ಯಾತನಹಳ್ಳಿ ಮನೋಜ್ ಕುಮಾರ್, ಹಳೇ ಕೆಂಪೆಹುಂಡಿ ಜಯಣ್ಣ, ಹೆಮ್ಮಿಗೆ ಮಲ್ಲೇಶ್, ಮಾರನಪುರ ಶಿವಮೂರ್ತಿ, ನಿಲಸೋಗೆ ಕುಮಾರ್, ಚೌಹಳ್ಳಿ ಪರಶುರಾಮ್, ಮಾರನಪುರ ಕೇಶವಮೂರ್ತಿ, ಬೆನಕನಹಳ್ಳಿ ಕಾರ್ ಸ್ವಾಮಿ, ಕುಪ್ಯಾ ಗವಿಸಿದ್ದಯ್ಯ ಹಾಗೂ ಉಕ್ಕಲಗೆರೆ ಮಹದೇವಸ್ವಾಮಿ, ಚಿದರಹಳ್ಳಿ ಮಹೇಶ್, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.