ತಿ.ನರಸೀಪುರ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಪುರಸಭೆಗೆ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಲಿಂಕ್ ರಸ್ತೆಯಲ್ಲಿ ಶನಿವಾರ ದೊಡ್ಡ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ಬಳಿಕ ಪುರಸಭೆ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ಪಟ್ಟಣದ ಜನತೆಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿದೆ. ಅಭಿವೃದ್ಧಿ ಕಾಮಗಾರಿ ಕೇವಲ ನಿರ್ಮಾಣಕ್ಕೆ ಸೀಮಿತವಾಗದೆ, ಸಾರ್ವಜನಿಕರಿಗೆ ದೀರ್ಘಕಾಲ ಉಪಯೋಗವಾಗುವ ರೀತಿಯಲ್ಲಿ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.
ತುರುಕನ ಕಟ್ಟೆ ಸಮಸ್ಯೆಗೆ ಪರಿಹಾರ: ಪಟ್ಟಣದ ತುರುಕನ ಕಟ್ಟೆಯಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು, ಸಣ್ಣ ನೀರಾವರಿ ಇಲಾಖೆಯಿಂದ 9 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು.
ಮಾರುಕಟ್ಟೆಗಳಿಗೆ ಹೊಸ ರೂಪ: ನಂತರ ಪುರಸಭೆಯಿಂದ ನಿರ್ಮಿಸುತ್ತಿರುವ ತರಕಾರಿ ಮಾರುಕಟ್ಟೆ ಕಾಮಗಾರಿ ಪರಿಶೀಲಿಸಿದ ಶಾಸಕ ಮಹದೇವಪ್ಪ, ಮಾರುಕಟ್ಟೆಯನ್ನು ವೈಜ್ಞಾನಿಕ ಹಾಗೂ ಆಧುನಿಕ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ, ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೂ ಬಳಕೆಗೆ ಬಾರದ ಸ್ಥಿತಿಯಲ್ಲಿದ್ದ ಹಳೆಯ ಮಾಂಸದ ಮಾರುಕಟ್ಟೆಗೆ ಪುರಸಭೆಯಿಂದ ಆಧುನಿಕ ಸ್ಪರ್ಶ ನೀಡಿ ಪುನಃ ಬಳಕೆಗೆ ಯೋಗ್ಯವಾಗಿಸಿರುವ ಕ್ರಮಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಹೂವಿನ ಮಾರುಕಟ್ಟೆಯನ್ನೂ ವೈಜ್ಞಾನಿಕ ಹಾಗೂ ಹೊಸ ವಿನ್ಯಾಸದಲ್ಲಿ ನಿರ್ಮಿಸಲಾಗಿದ್ದು, ಮಾರುಕಟ್ಟೆ ಪ್ರದೇಶಗಳು ಸ್ವಚ್ಛ ಹಾಗೂ ಸುಸಜ್ಜಿತವಾಗಿರುವಂತೆ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
24 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ: ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ 15 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಮಹದೇವಪ್ಪ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಬನ್ನೂರು ಪುರಸಭೆ ಮಾಜಿ ಸದಸ್ಯ ಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಉಮೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ನಂದೀಶ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಕುಕ್ಕೂರು ಗಣೇಶ್, ಆಪ್ತ ಸಹಾಯಕ ಬಿ.ಬಸವರಾಜು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಪುರಸಭೆ ಇಂಜಿನಿಯರ್ ರಾಮಚಂದ್ರ, ಪುರಸಭೆ ವ್ಯವಸ್ಥಾಪಕ ಮಹೇಂದ್ರ, ಲೆಕ್ಕಾಧಿಕಾರಿ ವಿನಯ್ ಇತರರು ಇದ್ದರು.