ಮೈಸೂರು: ಸುಸ್ಥಿರ ಕೃಷಿ ಮತ್ತು ಜೀವವೈವಿಧ್ಯ ಸಂರಕ್ಷಣೆ ಕೇವಲ ಶೈಕ್ಷಣಿಕ ಚರ್ಚೆಯ ವಿಷಯಗಳಲ್ಲ. ಅವು ಇಂದಿನ ತುರ್ತು ಅಗತ್ಯವಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಹೇಳಿದರು.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಮೈವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಸ್ಯ ಜೀವಶಾಸ್ತ್ರದಲ್ಲಿ ಹೊಸ ಆಯಾಮಗಳು’ ವಿಷಯಾಧಾರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಮನುಕುಲದ ಉಳಿವು, ಆರ್ಥಿಕತೆ ಮತ್ತು ಆರೋಗ್ಯ ಎಲ್ಲವೂ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇವೆ ಮತ್ತು ಪುನರುಜ್ಜೀವನಗೊಳಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿವೆ.
ಹವಾಮಾನ ಬದಲಾವಣೆ, ಆವಾಸಸ್ಥಾನಗಳ ನಾಶ, ಮಣ್ಣಿನ ಗುಣಮಟ್ಟದ ಕುಸಿತ, ಜೀವವೈವಿಧ್ಯತೆಯ ಇಳಿಮುಖದಂತಹ ಸವಾಲುಗಳು ಎದುರಾಗಿವೆ. ಇವು ಕೇವಲ ಪರಿಸರ ವ್ಯವಸ್ಥೆಗೆ ಮಾತ್ರವಲ್ಲದೆ, ಜಾಗತಿಕ ಆಹಾರ ಭದ್ರತೆಗೂ ಅಪಾಯವನ್ನು ಉಂಟು ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಆಧುನಿಕ ಸಸ್ಯಶಾಸ್ತ್ರವು ಎಲ್ಲ್ಲ ನೈಸರ್ಗಿಕ ವಿಜ್ಞಾನಗಳ ಪೈಕಿ ಅತ್ಯಂತ ವೈವಿಧ್ಯಮಯವಾದ ಕ್ಷೇತ್ರ. 2ನೇ ಮಹಾಯುದ್ಧದ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರದಂತಹ ಇತರ ವಿಭಾಗಗಳು ಸಸ್ಯಶಾಸ್ತ್ರದೊಂದಿಗೆ ಸಂಯೋಜನೆಗೊಂಡಿವೆ.
ಇದರಿಂದ ಜೀವ ಪ್ರಕ್ರಿಯೆ ವಿವರಿಸಲು ಸಾಧ್ಯವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಇಂತಹ ಅಂತರ್‌ಶಿಸ್ತೀಯ, ಬಹುಶಿಸ್ತೀಯ ಸಂಶೋಧನೆಗಳಲ್ಲಿನ ಆವಿಷ್ಕಾರಗಳಿಗಾಗಿ 100ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ನಾವೀನ್ಯತೆಗೆ ಸದಾ ಹೆಚ್ಚಿನ ಆದ್ಯತೆ ನೀಡಿದೆ. ಇಂದಿನ ಈ ಕಾರ್ಯಕ್ರಮವು ಸಸ್ಯವಿಜ್ಞಾನ, ಜೈವಿಕ ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಹೊಸ ದೃಷ್ಟಿಕೋನ ತೆರೆದಿಡಲಿ ಎಂದರು.
ಪರಸ್ಪರರ ಜ್ಞಾನ ಮತ್ತು ಅನುಭವಗಳಿಂದ ಕಲಿಯಲು ಹಾಗೂ ಕೃಷಿ, ಜೈವಿಕ ಸಂಶೋಧನೆಯ ಹೊಸ ಸಾಧ್ಯತೆ ಅನ್ವೇಷಿಸಲು ಅವಕಾಶ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯನ್ನು ಖಚಿತಪಡಿಸುವುದು ಜಾಗತಿಕ ಜವಾಬ್ದಾರಿ. ಅದಕ್ಕಾಗಿ ವಿಜ್ಞಾನ, ನಾವೀನ್ಯತೆ, ಸಹಯೋಗದ ಮೂಲಕ ನಾವೆಲ್ಲರೂ ಒಟ್ಟಾಗಿ ಹೆಚ್ಚು ಸದೃಢವಾದ ಹಾಗೂ ಸುಸ್ಥಿರ ಭವಿಷ್ಯ ನಿರ್ಮಿಸಬೇಕಿದೆ ಎಂದು ಹೇಳಿದರು.
ಯುವ ಜನರು ಸುಸ್ಥಿರ ಅಭಿವೃದ್ಧಿಯ ಭವಿಷ್ಯದ ರೂವಾರಿಗಳು. ಗಳಿಸುವ ಜ್ಞಾನ, ಸ್ಫೂರ್ತಿಯು ಸಮಾಜದಲ್ಲಿ ನೈಜ ಬದಲಾವಣೆ ತರುವಂತಹ ಕಾರ್ಯರೂಪದ ಕೊಡುಗೆಗಳಾಗಿ ಪರಿವರ್ತನೆಯಾಗಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯಸ್ಥ ಪ್ರೊ. ಎ.ಎಚ್.ರಾಜಸಾಬ್, ಲಕ್ನೋದ ವಿಜ್ಞಾನಿ ಡಾ. ಆರ್.ರಾಘವೇಂದ್ರರಾವ್, ಕೋಲ್ಕತದ ಡಾ. ಎಂ.ಸಂಜಪ್ಪ, ಹಿರಿಯ ವಿಜ್ಞಾನಿ ಡಾ. ಅಶ್ವಿನ್ ಸಾಯಿ ನರೇನ್ ಶೇಷಸಾಯಿ, ವಿಭಾಗದ ಮುಖ್ಯಸ್ಥೆ ಪ್ರೊ. ಎಂ.ಎಸ್.ನಳಿನಿ ಇದ್ದರು.