ಮೈವಿವಿ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ವಿಶ್ವ ಜಿಎಸ್‌ಐ ದಿನಾಚರಣೆಯನ್ನು ಅಟ್ಲಾಶಿನ್ ಟೆಕ್ ಕಂಪನಿಯ ನಿರ್ದೇಶಕ ಡಾ.ಸುರೇಶ್ ಚಿತ್ರರಾಪು ಉದ್ಘಾಟಿಸಿದರು. ಪ್ರೊ.ರಾಮು, ಪ್ರೊ.ಜಯಶ್ರೀ ಇತರರಿದ್ದರು  Ample opportunities for the use of GIS
ಮೈಸೂರು

ಜಿಐಎಸ್ ಬಳಕೆಗೆ ವಿಪುಲ ಅವಕಾಶ

ಭೂಗೋಳಶಾಸ್ತ್ರ ಅರಿತರೆ ಉದ್ಯೋಗ ಅವಕಾಶ ಹೆಚ್ಚು ಡಾ.ಸುರೇಶ್ ಚಿತ್ರರಾಪು ಹೇಳಿಕೆ ವಿಶ್ವ ಜಿಎಸ್‌ಐ ದಿನಾಚರಣೆ

ಮೈಸೂರು: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಎಸ್‌ಐ) ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ಕಲಿತಿರುವ ಭೂಗೋಳಶಾಸ್ತ್ರದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ತೆರೆದುಕೊಂಡಿವೆ ಎಂದು ಅಟ್ಲಾಶಿನ್ ಟೆಕ್ ಕಂಪನಿ ನಿರ್ದೇಶಕ ಡಾ.ಸುರೇಶ್ ಚಿತ್ರರಾಪು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜಿಎಸ್‌ಐ ದಿನಾಚರಣೆಯಲ್ಲಿ ಮಾತನಾಡಿದರು.

ಭೂಮಿಯ ಮೇಲಿನ ವಿವಿಧ ಪ್ರದೇಶಗಳು, ನೈಸರ್ಗಿಕ ಸಂಪನ್ಮೂಲಗಳು, ಜನಸಂಖ್ಯೆ, ಪರಿಸರ, ರಸ್ತೆಗಳು, ಜಲಮೂಲಗಳು ಸೇರಿದಂತೆ ಹಲವು ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ, ನಕ್ಷೆಗಳ ರೂಪದಲ್ಲಿ ಪ್ರದರ್ಶಿಸುವ ಅತ್ಯಾಧುನಿಕ ತಂತ್ರಜ್ಞಾನವೇ ಜಿಐಎಸ್. ಇದು ಹೆಚ್ಚು ಮುನ್ನೆಲೆ ಬರುತ್ತಿದೆ. ಹೀಗಾಗಿ, ಉದ್ಯೋಗಾವಕಾಶ ಹೆಚ್ಚಾಗಿವೆ. ಅದಕ್ಕೆ ಬೇಕಾದ ಕೌಶಲ ಕರಗತ ಮಾಡಿಕೊಳ್ಳಬೇಕಿದೆ ಎಂದರು.

ಡಿಜಿಟಲ್ ಯುಗದಲ್ಲಿ ಜಿಐಎಸ್ ಕೇವಲ ನಕ್ಷೆ ಸಿದ್ಧಪಡಿಸುವ ತಂತ್ರಜ್ಞಾನವಾಗಿ ಉಳಿದಿಲ್ಲ. ಅದು ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿ. ವೈಜ್ಞಾನಿಕ ನಿರ್ಧಾರ ಕೈಗೊಳ್ಳುವ ಪ್ರಬಲ ಸಾಧನವಾಗಿದೆ.

ವಿಶೇಷವಾಗಿ ನೈಸರ್ಗಿಕ ಸಂಪತ್ತು, ಅರಣ್ಯ, ಜಲಮೂಲಗಳು, ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಜಿಐಎಸ್ ಬಳಕೆಗೆ ವಿಪುಲ ಅವಕಾಶಗಳಿವೆ. ಕೆರೆಗಳ ಸಂರಕ್ಷಣೆ, ಅರಣ್ಯ ರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ, ನಗರಗಳ ಸುಸ್ಥಿರ ಬೆಳವಣಿಗೆಗೆ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದರು.

ಜಿಐಎಸ್ ತಂತ್ರಜ್ಞಾನವನ್ನು ಆಡಳಿತ, ಶಿಕ್ಷಣ, ಕೃಷಿ, ಪರಿಸರ ಸಂರಕ್ಷಣೆ, ಅಭಿವೃದ್ಧಿ ಕಾರ್ಯಗಳಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ, ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಅದಕ್ಕಾಗಿ ಈ ತಂತ್ರಜ್ಞಾನದ ಮಹತ್ವ, ಅದರ ಬಳಕೆ ಮತ್ತು ಸಮಾಜಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶ ಎಂದರು. ಅಧ್ಯಯನ ವಿಭಾಗದ ನಿರ್ದೇಶಕಿ ಪ್ರೊ.ಜಯಶ್ರೀ, ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಾಮು, ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಇದ್ದರು