ಜಲಕ್ರೀಡೆ 
ಮೈಸೂರು

ಜಲಕ್ರೀಡೆಗೆ ಕೊಟ್ಟಿಲ್ಲ ಪರವಾನಿಗೆ

ಜಲಕ್ರೀಡೆ ಜೀವಕ್ಕೆ ಆಪತ್ತು ತಂದೀತು ಜೋಕೆ! ಸಾಹಸ, ಮನರಂಜನೆ ಹೆಸರಿನಲ್ಲಿ ಪ್ರವಾಸಿಗರ ಪ್ರಾಣದ ಜತೆ ಚೆಲ್ಲಾಟ ಅಪಾಯ ತಪ್ಪಿಸಲು ಬೇಕಿದೆ ಕಡಿವಾಣ

ಜಲಕ್ರೀಡೆ ನಡೆಸಲು ಜಿಲ್ಲೆಯಲ್ಲಿ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡಿಲ್ಲ. ಕೆಲ ಅರ್ಜಿಗಳು ಸಲ್ಲಿಕೆಯಾಗಿತ್ತು. ಆದರೆ, ಷರತ್ತು, ಮಾರ್ಗಸೂಚಿಯನ್ನು ಪೂರೈಕೆ ಮಾಡದಿದ್ದರಿಂದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕೆ.ಪಿ.ಗುರುರಾಜ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮನರಂಜನೆ, ಸಾಹಸ, ದೈಹಿಕ ಸಾಮರ್ಥ್ಯ, ಮಾನಸಿಕ ಉಲ್ಲಾಸವನ್ನು ಒಟ್ಟಿಗೆ ಒದಗಿಸುವ ಜಲಕ್ರೀಡೆ ಪ್ರವಾಸೋದ್ಯಮದ ಆಕರ್ಷಣೆ. ಆದರೆ, ಅನುಮತಿ ಪಡೆಯದೆ ನಡೆಯುತ್ತಿರುವ ಜಲಕ್ರೀಡೆಗಳು ಜೀವಕ್ಕೆ ಆಪತ್ತು ತಂದಿಟ್ಟಿವೆ.

ಜಿಲ್ಲೆಯಲ್ಲಿ ಜಲಕ್ರೀಡೆಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಯಾವುದೇ ಒಂದೇಒಂದು ಸಂಸ್ಥೆಗೂ ಅನುಮತಿ ನೀಡಿಲ್ಲ. ಆದಾಗ್ಯೂ, ಹಲವೆಡೆ ಜಲಕ್ರೀಡೆ ನಿರಾತಂಕವಾಗಿ ನಡೆಯುತ್ತಿವೆ ಎಂಬುದೇ ಅಚ್ಚರಿ.

ಜತೆಗೆ, ಈ ಇಲಾಖೆಯಿಂದ ಕಡ್ಡಾಯವಾಗಿ ಪಡೆಯಬೇಕಾದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯದೇ ಖಾಸಗಿ ಸಂಸ್ಥೆಗಳು ಜಲಕ್ರೀಡೆ ನಡೆಸುತ್ತಿವೆಯೇ? ಎಂಬ ಅನುಮಾನ ಮೂಡಿದೆ.

ನಿಗದಿತ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಅಗ್ನಿಶಾಮಕ ಇಲಾಖೆಯು ಎನ್‌ಒಸಿ ನೀಡಲು ನಿರಾಕರಣೆ ಮಾಡಿದೆ. ಆದರೂ, ಖಾಸಗಿ ಜಲಕ್ರೀಡಾ ನಿರ್ವಾಹಕರು, ಪರ್ಯಾಯ ಮಾರ್ಗ ಕಂಡುಕೊಂಡು ವ್ಯವಹಾರ ಮುಂದುವರಿಸುತ್ತಿದ್ದಾರೆ.

ಅನುಮತಿ ನಿರಾಕರಣೆ:

ಜಿಲ್ಲಾ ವ್ಯಾಪ್ತಿಗೆ ಬರುವ ಕೆಆರ್‌ಎಸ್ ಹಿನ್ನೀರು, ವರುಣ ಕೆರೆಯಲ್ಲಿ ಜಲಕ್ರೀಡಾ ಚಟುವಟಿಕೆಯನ್ನು ನಡೆಸಲು ಖಾಸಗಿ ಸಂಸ್ಥೆಗಳು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಇಲಾಖೆಯು ಈ ಅರ್ಜಿಗಳನ್ನು ತಿರಸ್ಕರಿಸಿದೆ.

ಈ ನಡುವೆ, ಖಾಸಗಿ ಸಂಸ್ಥೆಗಳು, ಕಾವೇರಿ ನೀರಾವರಿ ನಿಗಮ ನಿಯಮಿತ, ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದು ಚಟುವಟಿಕೆ ಮುಂದುವರಿಸುತ್ತಿದ್ದಾರೆ ಎಂಬ ಆರೋಪವಿದೆ. ಇದರಿಂದ ಜಲಕ್ರೀಡೆಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಮತ್ತು ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಎನ್‌ಒಸಿ ಕಡ್ಡಾಯ;

ಖಾಸಗಿ ಸಂಸ್ಥೆಗಳು ಜಲಕ್ರೀಡಾ ಚಟುವಟಿಕೆ ನಡೆಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯ. ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ವಿಫಲವಾಗುವ ಖಾಸಗಿ ಸಂಸ್ಥೆಗಳು, ಸ್ಥಳೀಯ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಿ ಅನುಮತಿ ಪಡೆದು ಚಟುವಟಿಕೆ ಮುಂದುವರಿಸುವುದು ಕಾನೂನುಬಾಹಿರ.

ಜಿಲ್ಲೆಯಲ್ಲಿ ನಿಗದಿತ ಸುರಕ್ಷತಾ ಮಾನದಂಡ ಪೂರೈಸದ ಕಾರಣ ಯಾವುದೇ ಜಲಕ್ರೀಡಾ ಚಟುವಟಿಕೆಗೆ ಇಲಾಖೆಯಿಂದ ಅನುಮತಿ ನೀಡಿಲ್ಲ. ಆದರೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಕಾರ್ಯಾಚರಣೆ ಮುಂದುವರಿಸಿರುವುದು ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪಿಡಿಒ, ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ:

ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ, ಜಲಕ್ರೀಡೆ ನಡೆಸುವ ಸಂಸ್ಥೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂಬ ಷರತ್ತು ಇದೆ.

ಆದರೆ, ಇಂತಹ ಷರತ್ತುಗಳು ಉಲ್ಲಂಘಿಸಲಾಗುತ್ತದೆ. ಇದರಿಂದ ಜಲಕ್ರೀಡೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಬಹುದು. ಆಗ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿಯೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾರಂಗಿಯ ದುರಂತ ಪಾಠವಾಗಲಿ:

ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಇತ್ತೀಚೆಗೆ ಜಲಕ್ರೀಡೆ ವೇಳೆ ದೋಣಿ ಮಗುಚಿ ಗುಜರಾತ್ ಮೂಲದ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಲಕ್ರೀಡಾ ಚಟುವಟಿಕೆ ಸುರಕ್ಷತೆಯ ಬಗ್ಗೆ ಹಲವು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಇದು ಮೈಸೂರು ಜಿಲ್ಲೆಗೂ ಪಾಠವಾಗಬೇಕಿದೆ. ಇದರಿಂದ ಎಚ್ಚೆತ್ತುಕೊಳ್ಳುವ ಮೂಲಕ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕಿದೆ.

ಅನಧಿಕೃತ ನಡೆಯುತ್ತಿರುವುದು ಎಲ್ಲಿ?

ಮೈಸೂರು ಜಿಲ್ಲೆಯಲ್ಲಿ ವರುಣ ಕೆರೆಯಲ್ಲಿ ಮತ್ತು ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಕ್ರೀಡೆ ನಡೆಯುತ್ತಿದೆ. ಈ ಪೈಕಿ ವರುಣ ಕೆರೆಯಲ್ಲಿರುವ ಜಲಕ್ರೀಡೆಯನ್ನು ನಿಯಮ ಪಾಲನೆ ಮಾಡದ ಕಾರಣಕ್ಕೆ ಮುಚ್ಚಿಸಲಾಗಿದೆ. ಆದರೆ, ಖಾಸಗಿ ರೆಸಾರ್ಟ್‌ಗಳು ಕಬಿನಿ ನದಿಯಲ್ಲಿ ಜಲಕ್ರೀಡೆಗೆ ಉತ್ತೇಜಿಸುತ್ತಿವೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎನ್ನುವ ಆರೋಪವಿದೆ.

ಪಾಲನೆಯಾಗದ ನಿಯಮ

ಈಜು, ದೋಣಿ ವಿಹಾರ, ಕಯಾಕಿಂಗ್, ರಾಫ್ಟಿಂಗ್, ಜೆಟ್‌ಸ್ಕೀ, ವಾಟರ್ ಸರ್ಫಿಂಗ್, ಪ್ಯಾರಾಸೈಲಿಂಗ್ ಪ್ರಮುಖ ಜಲಕ್ರೀಡೆಗಳು. ನದಿ, ಕೆರೆ, ಜಲಾಶಯದ ಹಿನ್ನೀರು ಪ್ರದೇಶ ಜಲಕ್ರೀಡೆಗೆ ಹೆಚ್ಚಿನ ಅವಕಾಶವಿದೆ. ಜಲಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶದೊಂದಿಗೆ ಸ್ಥಳೀಯ ಆರ್ಥಿಕತೆ, ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗುತ್ತದೆ. ಆದರೆ ಜಲಕ್ರೀಡೆಗಳಲ್ಲಿ ಸುರಕ್ಷತೆ ಮುಖ್ಯ.

ತರಬೇತಿ ಪಡೆದ ಸಿಬ್ಬಂದಿ, ಸೂಕ್ತ ಸುರಕ್ಷತಾ ಪರಿಕರಗಳು, ಲೈಫ್ ಜಾಕೆಟ್, ರಕ್ಷಣಾ ದೋಣಿ, ಪ್ರಥಮ ಚಿಕಿತ್ಸಾ ವ್ಯವಸ್ಥೆ, ಅಗತ್ಯ ಇಲಾಖೆಗಳ ಅನುಮತಿ ಕಡ್ಡಾಯವಾಗಿರಬೇಕು. ಹವಾಮಾನ ಮತ್ತು ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಚಟುವಟಿಕೆ ನಡೆಸಬೇಕು. ಆದರೆ, ಈ ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬುದು ಕಳವಳಕಾರಿ.