ಪಿರಿಯಾಪಟ್ಟಣ: ತಾಲೂಕಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಹಾರನಹಳ್ಳಿ ಹೋಬಳಿ ಹಳಿಯೂರು ಗ್ರಾಮದ ಸರ್ವೇ ನಂ. 22/14 ರಲ್ಲಿನ ರೈತರಾದ ಚಪ್ಪರದಳ್ಳಿ ಅಜಿತ್ ಎಂಬುವರುಗೆ ಸೇರಿದ ಜಮೀನನ್ನು ನೋಟಿಸ್ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ಇತರರಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿದ್ದನ್ನು ರದ್ದುಗೊಳಿಸಬೇಕು. ಹಲವು ದಿನಗಳಿಂದಲೂ ಮುಮ್ಮಡಿ ಕಾವಲು ಗ್ರಾಮದ ಸರ್ವೇ ನಂ 1ರಲ್ಲಿನ ಜಮೀನುಗಳನ್ನು ದುರಸ್ತು ಮಾಡಿಕೊಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು.
ಐಚನಹಳ್ಳಿ ಗ್ರಾಮದ ಸ.ನಂ.51ರಲ್ಲಿ ಹಾಗೂ ಸುಂಕದಳ್ಳಿ ಗ್ರಾಮ ಸ.ನಂ.28/3 ಹಾಗೂ ಮರಡಿಯೂರು ಸ.ನಂ.6/ಪಿ ನಲ್ಲಿ ರೈತರು ಹಲವು ವರ್ಷಗಳಿಂದ ಭೂಮಿಯನ್ನು ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಆದರೆ, ಕೃಷಿ ಚಟುವಟಿಕೆಗಾಗಿ ಬಳಸುತ್ತಿದ್ದ ಸಾಂಪ್ರದಾಯಿಕ ರಸ್ತೆಯನ್ನು ಮುಚ್ಚಿ ಬಡ ರೈತರಿಗೆ ಅನಾನುಕೂಲವಾಗುವಂತೆ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಆದರಿಂದ್ದ ಈ ಭಾಗದಲ್ಲಿ ರೈತರಿಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಹಾರನಹಳ್ಳಿ ಹೋಬಳಿ ಹಳಿಯೂರು ಗ್ರಾಮದ ಮರಿಗೌಡ ಎಂಬುವರಿಗೆ ಸೇರಿದ ಜಮೀನನ್ನು ಒತ್ತುವರಿ ಜಮೀನು ಎಂದು ನಮೂದಿಸಿರುವುದನ್ನು ಇಲಾಖೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಪ್ಪರದಳ್ಳಿ ಅಜಿತ್, ತಾಲೂಕು ಅಧ್ಯಕ್ಷ ವಿವೇಕಾನಂದ, ಉಪಾಧ್ಯಕ್ಷ ಲೋಕೇಶ್ ಆರಾಧ್ಯ, ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ರಾಮೇಗೌಡ, ಮುಖಂಡರಾದ ದೊಡ್ಡಯ್ಯ, ಸಿ.ಎಸ್. ಜಗದೀಶ್, ಅಭಿ, ಚೆಲುವರಾಯಿ, ಶ್ರೀನಿವಾಸ್, ರವೀಶ್ ಇತರರಿದ್ದರು.