ದಸರಾ ಕುಸ್ತಿ ಸಮಿತಿಯಿಂದ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ರಮಕ್ಕೆ ಡಾ.ಯತೀಂದ್ರ ಚಾಲನೆ ನೀಡಿದರು. ಟಿ.ಎಸ್. ಶ್ರೀವತ್ಸ, ಮಲ್ಲಿಕಾರ್ಜುನ ಬಾಲದಂಡಿ, ಎಲ್.ನಾಗೇಶ್, ನರಸಿಂಹಮೂರ್ತಿ, ಧರ್ಮೇಂದ್ರ, ಪೈಲ್ವಾನರು ಇದ್ದರು. 
ಮೈಸೂರು

ಜಂಬೂಸವಾರಿಯಷ್ಟೇ ದಸರಾ ಕುಸ್ತಿಯೂ ಪ್ರಸಿದ್ಧಿ: ಡಾ.ಯತೀಂದ್ರ ಸಿದ್ದರಾಮಯ್ಯ

ದಸರಾ ಕುಸ್ತಿ ಜೋಡಿ ಕಟ್ಟುವ ಕಾರ್ಯ

ಮೈಸೂರು: ದಸರಾ ಜಂಬೂಸವಾರಿಯಷ್ಟೇ ದಸರಾ ಕುಸ್ತಿಯೂ ಪ್ರಸಿದ್ಧಿ ಪಡೆದಿದ್ದು, ಇದು ನಮ್ಮ ನೆಲದ ಕ್ರೀಡೆ. ಕಣ್ಮರೆಯಾಗುತ್ತಿರುವ ಕುಸ್ತಿ ಕಲೆಯನ್ನು ಪೋಷಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ದಸರಾ ಕುಸ್ತಿ ಸಮಿತಿಯಿಂದ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ದಸರಾ ಮಾಹೋತ್ಸವ -2026 ರ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ನಾಡಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಕುಸ್ತಿ ಪಂದ್ಯಾವಳಿಯ ಭಿತ್ತಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದಸರಾ ಕುಸ್ತಿ ಪಂದ್ಯ ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ನಮ್ಮ ಸರ್ಕಾರ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಮೈಸೂರು ಅರಸರು ಸೇರಿದಂತೆ ಹಲವು ರಾಜರು ಕುಸ್ತಿ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.

ದಸರಾ ಕುಸ್ತಿ ಎಂದರೆ ದೇಶ-ವಿದೇಶಗಳಿಂದಲೂ ವೀಕ್ಷಣೆ ಮಾಡಲು ಬರುತ್ತಾರೆ. ಏಳು ದಿನಗಳು ನಡೆಯುವ ಪಂದ್ಯಾವಳಿಗಳಿಗೆ ಭಾಗವಹಿಸುವ ರಾಜ್ಯದ ಎಲ್ಲ ಕುಸ್ತಿಪಟುಗಳಿಗೆ ಕುಸ್ತಿ ಸಮಿತಿ ವತಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಎಸ್. ಶ್ರೀವತ್ಸ ಕುಸ್ತಿಪಟುಗಳಿಗೆ ಶುಭ ಕೋರಿದರು. ಜಿಲ್ಲಾ ಪೋಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೋಲೀಸ್ ಅಧೀಕ್ಷಕರು ಹಾಗೂ ಕುಸ್ತಿ ಉಪಸಮಿತಿಯ ಉಪ ವಿಶೇಷಾಧಕಾರಿ ಎಲ್.ನಾಗೇಶ್, ಕುಸ್ತಿ ಉಪಸಮಿತಿಯ ಕಾರ್ಯದರ್ಶಿ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷರಾದ ಧರ್ಮೇಂದ್ರ, ಪಲ್ವಾನರು ಇದ್ದರು.

250 ಜೋಡಿಗಳ ಸೆಣಸಾಟ:

ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ನಡೆಯುವ ನಾಡಕುಸ್ತಿಯಲ್ಲಿ 250 ಜತೆ ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. ಜೋಡಿ ಕಟ್ಟುವ ಕಾರ್ಯದಲ್ಲಿ ಕುಸ್ತಿಯಲ್ಲಿ ಸೆಣಸಬಹುದಾದ ಕುಸ್ತಿ ಪಟುಗಳನ್ನು ಗುರುತಿಸಲಾಯಿತು. ಅ.11 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಡಕುಸ್ತಿಗೆ ಚಾಲನೆ ನೀಡುವರು.

ಅ.12 ರಿಂದ 17 ರವರೆಗೆ ಪ್ರತಿನಿತ್ಯ ಸಂಜೆ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ದಸರಾ ಪಾಯಿಂಟ್ ಕುಸ್ತಿ ನಡೆದರೆ, ಸಂಜೆ 4 ರಿಂದ 9.30 ವರೆಗೆ ನಾಡ ಕುಸ್ತಿ ಪಂದ್ಯಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ನಾಡಕುಸ್ತಿಯಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳನ್ನು ವಯಸ್ಸು, ತೂಕ, ದೇಹದಾರ್ಢ್ಯತೆ ಆಧಾರದಲ್ಲಿ ಗುರುತಿಸಿ ಜತೆ ಕಟ್ಟಲಾಯಿತು.

ಜೋಡಿ ಕಟ್ಟುವ ಚಟುವಟಿಕೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಧಾರವಾಡ, ಕೋಲಾರ, ಬೆಳಗಾವಿ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ ನಾನಾ ಜಿಲ್ಲೆ ಅಲ್ಲದೇ ಮೈಸೂರಿನ ನಾನಾ ಗರಡಿಯ ಪೈಲ್ವಾನರು, ನಂಜನಗೂಡು, ಶ್ರೀರಂಗಪಟ್ಟಣ, ಹುಲ್ಲಹಳ್ಳಿ, ಬನ್ನೂರು ಸೇರಿದಂತೆ ಹಲವು ಕಡೆಗಳಿಂದ ಒಟ್ಟು 600 ಕ್ಕೂ ಹೆಚ್ಚು ಕುಸ್ತಿಪಟುಗಳು ಆಗಮಿಸಿದ್ದರು.

ಇವರೆಲ್ಲರನ್ನೂ ಒಂದೆಡೆ ಸೇರಿಸಿ ಹಿರಿಯ ಪೈಲ್ವಾನರು ಸಮಬಲದ ಜೋಡಿ ಪೆಲ್ವಾನರನ್ನು ಗುರುತಿಸಿ ಜತೆ ಕಟ್ಟುವ ಕಾರ್ಯ ನಡೆಸಿದರು. ಸಂಜೆ 5 ಗಂಟೆ ವರೆಗೂ ಜೋಡಿಕಟ್ಟುವ ಕಾರ್ಯ ನಡೆಯಿತು.