ಸುನೀಲ್ ಕುಮಾರ್ 
ಮೈಸೂರು

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಖಂಡನೆ

ಪಿರಿಯಾಪಟ್ಟಣ ಬಿಜೆಪಿ ಕಾರ್ಯದರ್ಶಿ ಸುನೀಲ್‌ಕುಮಾರ್ ಬೆಟ್ಟದಪುರ ಆಕ್ರೋಶ

ಬೆಟ್ಟದಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಜನತೆ ಹಾಗೂ ಹಳ್ಳಿಗಳ ಕುರಿತು ನೀಡಿರುವ ಹೇಳಿಕೆಗಳು ಅಸಂವೇದನಾಶೀಲವಾಗಿದ್ದು, ಜನರ ಭಾವನೆಗಳಿಗೆ ಧಕ್ಕೆ ತರುವಂತಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಪಿರಿಯಾಪಟ್ಟಣ ಬಿಜೆಪಿ ಕಾರ್ಯದರ್ಶಿ ಸುನೀಲ್‌ಕುಮಾರ್ ಬೆಟ್ಟದಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಇಂದಿನ ರಾಜಕೀಯ ಪರಿಸ್ಥಿತಿ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಪ್ರದೀಪ್ ಈಶ್ವರ್, ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರಂತಹ ನಾಯಕರಿಗೆ ಕುಟುಂಬದ ಪ್ರಭಾವ ಮತ್ತು ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅಧಿಕಾರ ಹಾಗೂ ಪ್ರಾಮುಖ್ಯತೆ ನೀಡುತ್ತಿರುವುದು ಕುಟುಂಬ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ರಾಮಕೃಷ್ಣ ಹೆಗಡೆ, ಆರ್.ವಿ.ಗುಂಡೂರಾವ್, ಧರಂ ಸಿಂಗ್, ಬಂಗಾರಪ್ಪ ಹಾಗೂ ಎಸ್.ಎಂ. ಕೃಷ್ಣ ಅವರಂತಹ ಪ್ರಬುದ್ಧ, ಅನುಭವಿ ಮತ್ತು ದೂರದೃಷ್ಟಿಯ ನಾಯಕರನ್ನು ನೀಡಿತ್ತು. ಆದರೆ ಇಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದಲೇ ಅಸಂವಿಧಾನಿಕ ಹಾಗೂ ಅಸಂವೇದನಾಶೀಲ ಪದ ಪ್ರಯೋಗಗಳು ಕೇಳಿಬರುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ಹಳ್ಳಿ ಎಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ. ಅದು ಅಲ್ಲಿನ ಜನರ ಬದುಕು, ಸಂಸ್ಕೃತಿ, ಸಂಪ್ರದಾಯ, ಸ್ವಾಭಿಮಾನ ಮತ್ತು ಭಾವನೆಗಳ ಪ್ರತೀಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ತಮ್ಮ ಊರೇ ಸ್ವರ್ಗವಿದ್ದಂತೆ. ಅಂತಹ ಜನರ ಬದುಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಯಾವುದೇ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ವೈಯಕ್ತಿಕ ರಾಜಕೀಯ ಹಿತಾಸಕ್ತಿ ಮತ್ತು ಅಹಂಕಾರಕ್ಕಾಗಿ ಗ್ರಾಮೀಣ ಜನತೆಯನ್ನು ಕೀಳಾಗಿ ಕಾಣುವ ಧೋರಣೆ ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.