ಬನ್ನೂರಿನ ಎಸ್‌ಆರ್‌ಪಿ ಮುಖ್ಯರಸ್ತೆಯ ಲಯನ್ಸ್ ವಿದ್ಯಾ ಸಂಸ್ಥೆಯ ಮುಂದಿರುವ ಚರಂಡಿಯಲ್ಲಿ ನೀರು ನಿಂತಿರುವುದು. 
ಮೈಸೂರು

ಗಬ್ಬೆದ್ದು ನಾರುತ್ತಿದೆ ಬನ್ನೂರು ಮುಖ್ಯರಸ್ತೆ

ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ

ಬನ್ನೂರು: ಇಲ್ಲಿನ ಜನನಿಬಿಡ ಪ್ರದೇಶದ ಎಸ್‌ಆರ್‌ಪಿ ಮುಖ್ಯರಸ್ತೆಯ ಬದಿಯಲ್ಲಿರುವ ಚರಂಡಿಯ ನೀರು ಒಂದೇ ಕಡೆ ನಿಂತಿದ್ದರೂ ಬನ್ನೂರು ಪುರಸಭೆ ಅಧಿಕಾರಿಗಳು ಅದನ್ನು ಸರಿಪಡಿಸಲು ಕಾರ್ಯಪ್ರವೃತ್ತರಾಗದೆ ಸಾರ್ವಜನಿಕರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಬನ್ನೂರಿನ ಲಯನ್ಸ್ ವಿದ್ಯಾ ಸಂಸ್ಥೆಯ ಮುಂಭಾಗದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ನೀರು ನಿಲ್ಲುತ್ತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿಯ ನೀರು ರಸ್ತೆಗೆ ಸೇರುವಂತಾಗಿದೆ. ಅಲ್ಲದೆ ನಿಂತ ನೀರಿನಿಂದಾಗಿ ಸೊಳ್ಳೆಗಳು, ಕ್ರಿಮಿ-ಕೀಟಗಳ ಉತ್ಪತ್ತಿಯೂ ಹೆಚ್ಚಾಗುತ್ತಿದೆ.

ಈ ಭಾಗದ ಹತ್ತಿರದಲ್ಲೇ ಪ್ರತಿನಿತ್ಯ ಸಂತೆಯಂತೆ ತರಕಾರಿ, ಹಣ್ಣುಗಳು, ಹೂ ಸೇರಿದಂತೆ ಇತರ ವಸ್ತುಗಳ ಮಾರಾಟ ನಡೆಯುವುದರಿಂದ ಇಲ್ಲಿ ನಿತ್ಯ ಜನರ ಓಡಾಟವೂ ಹೆಚ್ಚಾಗಿದೆ. ಜತೆಗೆ ಮಾರುಕಟ್ಟೆಗೆ ಹೋಗುವವರು, ವಿವಿಧ ಊರುಗಳಿಗೆ ಹೋಗುವವರು ಚರಂಡಿಯ ವಾಸನೆಯಿಂದ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಜೆಯಾದರಂತೂ ಈ ಭಾಗದಲ್ಲಿ ವಿವಿಧ ಆಹಾರ ಮಾರಾಟ ಮಾಡುವ ಅಂಗಡಿಗಳು, ಹೋಟೆಲ್‌ಗಳು, ಫಾಸ್ಟ್ ಫುಡ್ ಅಂಗಡಿಗಳನ್ನು ತೆರೆಯುವುದರಿಂದ ಜನರು ವಾಸನೆಯಲ್ಲೇ ಆಹಾರ ಪದಾರ್ಥವನ್ನು ಸೇವನೆ ಮಾಡುವಂತಾಗಿರುವುದು ವಿಪರ್ಯಾಸ. ಪಕ್ಕದಲ್ಲಿಯೇ ಲಯನ್ಸ್ ವಿದ್ಯಾ ಸಂಸ್ಥೆಯಿದ್ದು, ಮಕ್ಕಳು ಸೊಳ್ಳೆಗಳ ಕಾಟಕ್ಕೂ ಹೈರಾಣಾಗುವಂತೆ ಮಾಡಿದೆ.

ದಿನಸಿ ಅಂಗಡಿ ಮಾಲೀಕ ಸಂಜು ಮಾತನಾಡಿ, ಚರಂಡಿಯಲ್ಲಿ ಕೊಳಚೆ ನೀರು ನಿಂತಿದ್ದರೂ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪರಿಸರ ಇಂಜಿನಿಯರ್‌ಗಳಾಗಲಿ, ಪುರಸಭೆ ಮುಖ್ಯಾಧಿಕಾರಿಯಾಗಲಿ ಗಮನ ಹರಿಸದಿರುವುದು ವಿಪರ್ಯಾಸ. ಸರ್ಕಾರದ ನಿಯಮಾವಳಿಯ ಪ್ರಕಾರ ಅಧಿಕಾರಿಗಳು ಗಸ್ತು ತಿರುಗಿ ಸಮಸ್ಯೆಗಳನ್ನು ಸರಿಪಡಿಸುವುದು ಅವರ ಆದ್ಯ ಕರ್ತವ್ಯ. ಆದರೆ ಅದನ್ನು ಅವರು ಮರೆತ್ತಿದ್ದಾರೆ. ಸದಾ ಜನನಿಬಿಡ ಪ್ರದೇಶವಾಗಿರುವ, ವ್ಯಾಪಾರದ ಚಟುವಟಿಕೆ ಕೇಂದ್ರವಾಗಿರುವ ಸ್ಥಳದಲ್ಲಿರುವ ಚರಂಡಿಯನ್ನು ಸರಿಪಡಿಸಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಗೆ ವಿವಿಧ ಕಡೆಗಳಿಂದ ಚಿಕ್ಕಪುಟ್ಟ ಮಕ್ಕಳು ಬರುವುದರಿಂದ ಮಕ್ಕಳು ಸೊಳ್ಳೆಗಳ ಕಾಟಕ್ಕೆ ತೊಂದರೆ ಅನುಭವಿಸುವಂತಾಗಿದೆ. ಇಂತಹ ಸಮಸ್ಯೆಯನ್ನು ಬಗೆಹರಿಸಲು ಚರಂಡಿಯಲ್ಲಿ ಗಲೀಜು ನೀರು ನಿಲ್ಲದಂತೆ ಸರಿಪಡಿಸಿ, ಮೇಲ್ಭಾಗ ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.