ಹುಣಸೂರು ತಾಲೂಕು ಹಳೇಬೀಡು ಗ್ರಾ.ಪಂ.ವ್ಯಾಪ್ತಿಯ ಕುಂಚನಕುಟ್ಟೆ ಕೆರೆಯಂಗಳದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಮುಖಂಡರು ಸಂವಿಧಾನ ಪೀಠಿಕೆ ಓದಿದರು. ಪಿಡಿಒ ರಾಮಣ್ಣ, ಔಟ್‌ರಿಚ್‌ನ ಜಗದೀಶ್, ಡಿಸೋಜಾ ಇತರರಿದ್ದರು. 
ಮೈಸೂರು

ಕೆರೆಯಂಗಳದಲ್ಲಿ ಸ್ವಚ್ಛತಾ ಕಾರ್ಯ

ಅಮೃತ ಸರೋವರ ದಂಡೆಯಲ್ಲಿ ಸಂವಿಧಾನ ದಿನಾಚರಣೆ

ಹುಣಸೂರು: ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಅಮೃತ ಸರೋವರ ಕೆರೆಗಳ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ಮತ್ತು ಸಂವಿಧಾನ ಪೀಠಿಕೆ ವಾಚಿಸಲಾಯಿತು.

ತಾಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಚನಕಟ್ಟೆ, ಬನ್ನಿಕುಪ್ಪೆ ಗ್ರಾ.ಪಂ.ನ ಬನ್ನಮ್ಮನ ಕೆರೆ, ಬಿಳಿಕೆರೆ ಗ್ರಾ.ಪಂ.ನ ಪಟ್ಟಲದಮ್ಮನ ಕೆರೆ, ಹರವೆ ಗ್ರಾ.ಪಂ.ನ ಅಪ್ಪುಗೌಡನಕಟ್ಟೆ, ಹನಗೋಡಿನ ಗೌಡಿಕೆರೆ, ಕೊತ್ತೇಗಾಲದ ಬೀರಪ್ಪ ದೇವಸ್ಥಾನದ ಕಲ್ಯಾಣಿ ಸೇರಿದಂತೆ ಬಿಳಿಗೆರೆ, ನೇರಳೆಕುಪ್ಪೆ, ಜಾಬಗೆರೆ ಗ್ರಾಮ ಪಂಚಾಯಿತಿಯಲ್ಲಿರುವ ಅಮೃತ ಸರೋವರಗಳಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಕೆರೆಗಳ ದಡವನ್ನು ಸ್ವಚ್ಛಗೊಳಿಸಿ ಕಿರು ಅರಣ್ಯ ಅಭಿವೃದ್ಧಿಗೆ ಸಸಿಗಳನ್ನು ನೆಡಲಾಯಿತು.

ಹಳೆಬೀಡು ಗ್ರಾ.ಪಂ.ವ್ಯಾಪ್ತಿಯ ಕುಂಚನಕಟ್ಟೆ ಕೆರೆಯಂಗಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಇದರಲ್ಲಿರುವ ಆಶಯಗಳು ಪ್ರಜೆಗಳ ರಕ್ಷಣೆ, ಗೌರವ ಹಾಗೂ ಘನತೆ ಎತ್ತಿ ಹಿಡಿಯಲಿದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ ಮಾತನಾಡಿ, ಸಂವಿಧಾನದ ಆಶಯದಂತೆ ಸಕಲ ಜೀವರಾಶಿಗಳ ರಕ್ಷಣೆ, ಪರಿಸರ ಸಂರಕ್ಷಣೆ ಮಾಡುವುದು ಪ್ರಜೆಗಳ ಮೊದಲ ಕರ್ತವ್ಯವಾಗಬೇಕು. ನಮಗೆ ಜೀವಿಸಲು ಎಷ್ಟು ಹಕ್ಕು ಇದೆಯೋ ಅಷ್ಟೇ ಕರ್ತವ್ಯ ಪ್ರಕೃತಿ ರಕ್ಷಣೆಯ ಹೊಣೆಗಾರಿಕೆ ನಮ್ಮಗಳ ಮೇಲೆ ಇರುತ್ತದೆ ಎಂದರು.

ಪಂಚಾಯಿತಿ ಕಾರ್ಯದರ್ಶಿ ಡಿಸೋಜಾ, ತಾಲೂಕು ಐಇಸಿ ಸಂಯೋಜಕಿ ಪುಷ್ಪಾ, ಅಂಗನವಾಡಿ ಕಾರ್ಯಕರ್ತೆಯರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.