ಕೆ.ಆರ್.ನಗರ: ಪಟ್ಟಣದಲ್ಲಿ ನಿರ್ಮಾಣವಾದ ಎರಡನೇ ಹಂತದ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಜಮೀನು ನೀಡಿದ್ದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಆದೇಶದ ಮೇರೆಗೆ ಪುರಸಭೆಯ ಸ್ಥಿರಾಸ್ತಿಯನ್ನು ಬುಧವಾರ ನ್ಯಾಯಾಲಯದ ಸಿಬ್ಬಂದಿ ಮತ್ತು ರೈತರಿಂದ ಜಪ್ತಿ ಮಾಡಲಾಯಿತು.
ತಮ್ಮ ಜಮೀನು ಕಳೆದುಕೊಂಡು ಸರ್ಕಾರದಿಂದ ಅನ್ಯಾಯಕ್ಕೊಳಗಾದ ರೈತರೊಡಗೂಡಿ ಸೆ.30ರಂದು ವಕೀಲರು ಮತ್ತು ಕೋರ್ಟ್ ಅಮೀನುದಾರರು ಪಟ್ಟಣದ ಪುರಸಭೆಗೆ ಆಗಮಿಸಿ ಜಪ್ತಿ ಆದೇಶದೊಂದಿಗೆ ಪುರಸಭೆಯಲ್ಲಿದ್ದ ಎಲ್ಲ ಕಂಪ್ಯೂಟರ್, ಪ್ರಿಂಟರ್, ಸ್ಟೀಲ್ ಚೇರ್, ಚೇರ್‌ಗಳಿಗೆ ನೋಟಿಸ್ ಅಂಟಿಸಿ ಹಲವಾರು ವಸ್ತುಗಳನ್ನು ಪುರಸಭೆಯಿಂದ ಹೊರತೆಗೆದು ಲಾರಿಗೆ ತುಂಬಿದರು.
ಈ ಹಿಂದೆ ಕಳೆದ ಎರಡು ಬಾರಿಯೂ ಜಪ್ತಿ ಆದೇಶದೊಂದಿಗೆ ಬಂದಿದ್ದಾಗ ಪುರಸಭಾ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ಕಾರಣ ಜಪ್ತಿಯನ್ನು ಮುಂದೂಡಲಾಗಿತ್ತು. ಅಂತೆಯೇ ಬುಧವಾರ ಆಗಮಿಸಿದ ರೈತರ ಪರ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಪುರಸಭೆ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದರು.
ಏನಿದು ಪ್ರಕರಣ?: 2009ರಲ್ಲಿ ಪಟ್ಟಣದ ಮಧುವನಹಳ್ಳಿ, ಜೋಡಿಗೌಡನ ಕೊಪ್ಪಲು ಮತ್ತು ಕಾಳೇನಹಳ್ಳಿ ವ್ಯಾಪ್ತಿಯಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಲಾಗಿರುವ ಒಳಚರಂಡಿ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ 30ಕ್ಕೂ ಹೆಚ್ಚು ರೈತರಿಂದ ಸುಮಾರು 7 ಎಕರೆ 14 ಗುಂಟೆ ಜಮೀನನ್ನು ವಶಕ್ಕೆ ಪಡೆದು ಅಂದು ತಲಾ ಒಂದು ಗುಂಟೆಗೆ 13 ಸಾವಿರ ರೂ.ನಂತೆ ಸುಮಾರು 80 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗಿತ್ತು.
ಆದರೆ ಜಮೀನು ಕಳೆದುಕೊಂಡ ರೈತರು ತಮಗೆ ನೀಡಿರುವ ಪರಿಹಾರದ ಹಣ ಸಾಲದೆಂದು ಕೋರ್ಟ್ ಮೊರೆ ಹೋಗಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದ್ದರು. ವಾದ ಆಲಿಸಿದ ಕೋರ್ಟ್ ಕಳೆದ ಎರಡು ವರ್ಷಗಳ ಹಿಂದೆಯೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ಪುರಸಭೆ ಆಡಳಿತ ಮತ್ತು ಸರ್ಕಾರ ವಿಫಲಗೊಂಡ ಕಾರಣ ವಕೀಲ ವಿ.ಎಸ್.ಧನಂಜಯ ರೈತಪರ ವಕಾಲತ್ತು ವಹಿಸಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.
ವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ಪುರಸಭೆ ಆಸ್ತಿ ಜಪ್ತಿ ಮಾಡಲು ಆದೇಶ ಹೊರಡಿಸಿತ್ತು. ಅಂತೆಯೇ ವಕೀಲ ವಿ.ಎಸ್.ಧನಂಜಯ ಕೋರ್ಟ್ ಅಮೀನರೊಡಗೂಡಿ ಪುರಸಭೆ ಜಪ್ತಿಗೆ ಮುಂದಾದಾಗ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಧ್ಯಪ್ರವೇಶ ಮಾಡಿ ಜಪ್ತಿ ಮಾಡುವುದು ಬೇಡ ಎಂದು ಮನವಿ ಮಾಡಿ ಜು.31ರವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಇಲ್ಲಿಯವರೆಗೆ ಕ್ರಮ ವಹಿಸಿ ಪರಿಹಾರ ಒದಗಿಸದ ಹಿನ್ನೆಲೆಯಲ್ಲಿ ಪುರಸಭಾ ಆಸ್ತಿ ಜಪ್ತಿ ಮಾಡಿದರು.
ಈ ಸಂದರ್ಭದಲ್ಲಿ ವಕೀಲ ವಿ.ಎಸ್.ಧನಂಜಯ್, ಭೂಮಿ ಕಳೆದುಕೊಂಡ ರೈತರಾದ ಎಂ.ಆರ್.ಈಶ್ವರ್, ಬಸವರಾಜ್, ಲಾರಿ ನಾಗರಾಜನಾಯಕ, ಟೈಲರ್ ಮಂಜು, ಪಾಪೇಗೌಡ, ಕೃಷ್ಣೇಗೌಡ, ಚಂದ್ರೇಗೌಡ, ವೆಂಕಟೇಗೌಡ, ಸ್ವಾಮಿಗೌಡ, ಅಭಿ, ಶಿವಣ್ಣೇಗೌಡ, ಪದ್ದು ಇನ್ನಿತರರು ಹಾಜರಿದ್ದರು.