ಬಹಾದ್ದೂರ್ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಪಿ.ವಿ.ನಂಜರಾಜೇ ಅರಸ್, ಶ್ರೀನಿವಾಸ ಬಹಾದ್ದೂರ್ ಅವರನ್ನು ಸನ್ಮಾನಿಸಲಾಯಿತು. ವಿ.ಆರ್.ಸುದರ್ಶನ್, ಎಂ.ಶಿವಣ್ಣ, ಡಾ.ಎಂ.ಜಿ.ಆರ್. ಅರಸ್, ಅಮರನಾಥರಾಜೇ ಅರಸ್ ಇತರರಿದ್ದರು. 
ಮೈಸೂರು

ಕೃಷ್ಣರಾಜ ಒಡೆಯರ್‌ರಿಂದ ಕರ್ನಾಟಕದಲ್ಲಿ ಪ್ರಗತಿ:ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಮತ

ಸಾಧಕರಿಗೆ ಅಭಿನಂದನಾ ಸಮಾರಂಭ

ಮೈಸೂರು:ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನರ ಬದುಕಿಗಾಗಿ ಆಡಳಿತದಲ್ಲಿ ಬಹುದೊಡ್ಡ ಬದಲಾವಣೆ ತಂದ ಪರಿಣಾಮ ಕರ್ನಾಟಕದ ಪ್ರಗತಿ ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಬಣ್ಣಿಸಿದರು.

ಬಹಾದ್ದೂರ್ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಇಂಜಿನಿಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಥೆಯ ಉದ್ಘಾಟನೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಅಭಿವೃದ್ಧಿಗಾಗಿ ರಾಜರು ತಮ್ಮ ವಡವೆ, ಆಸ್ತಿ ಮಾರಿದ್ದಾರೆ. ಅಂತಹ ರಾಜರನ್ನು ಸದಾ ಸ್ಮರಿಸಿಕೊಳ್ಳಬೇಕು. ಇತಿಹಾಸವನ್ನು ಯಾರೂ ತಮ್ಮ ತಮ್ಮ ಅನುಕೂಲಕ್ಕಾಗಿ ಬರೆಯಬೇಕಾದರೆ ಅದು ಇತಿಹಾಸಕ್ಕೆ ಮತ್ತು ಪರಂಪರೆಗೆ ಮಾಡುವ ಅವಮಾನ ಹಾಗೂ ಅಪಚಾರ ಎಂದರು.

ಜನರ ಬದುಕಿಗಾಗಿ ವಿಶೇಷ ಕಾನೂನು ಮತ್ತು ಕಾರ್ಯಕ್ರಮ ಜಾರಿಗೆ ತರುವ ಮೂಲಕ ನಾಲ್ವಡಿ ಅವರು ಇತಿಹಾಸ ಸೃಷ್ಟಿಸಿ ಎಲ್ಲ ಕಾಲಕ್ಕೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಚುನಾವಣೆಗಳಲ್ಲಿ ಊರುಗಳಲ್ಲಿ ಅಥವಾ ಹಳ್ಳಿಗಳಲ್ಲಿ ಯಾವ ಸಮುದಾಯಗಳಲ್ಲಿ ಹೆಚ್ಚು ಇದ್ದಾರೆ ಎಂದು ಲೆಕ್ಕ ಹಾಕುತ್ತಾರೆ. ಆದರೆ ಅಲ್ಲಿನ ಅಲ್ಪಸಂಖ್ಯಾತರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅಂದರೆ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಗೆ ಯಾವ ಅರ್ಥವೂ ಇರುವುದಿಲ್ಲ ಎಂದರು.

ಬದುಕಿಗೆ ಹಾಗೂ ಪ್ರಗತಿಗೆ ಅನುಕೂಲ ಮಾಡುವಂತಹ ಎಲ್ಲ ವೃತ್ತಿ ಮಾಡುವವರು ಸಮಾಜಕ್ಕೆ ಅಗತ್ಯವಿದೆ. ಅಲ್ಪಸಂಖ್ಯಾತರಿಗೆ ಹಿಯಾಳಿಸಿ ಮಾತನಾಡಿ ಬಿಟ್ಟರೆ ಜನಸಂಖ್ಯೆ ಕಡಿಮೆ ಇರುವ ಸಮುದಾಯ ಮಾನಸಿಕವಾಗಿ ಪಡುವ ಯಾತನೆ ಹಾಗೂ ಸಿಟ್ಟನ್ನು ತೋರಿಸಿಕೊಳ್ಳಲು ಅವರಿಂದ ಆಗುವುದಿಲ್ಲ. ಅವರ ಸಿಟ್ಟು, ನೋವನ್ನು ಗಮನಿಸುವವರು ಯಾರು ಎಂದು ಅವರು ಪ್ರಶ್ನಿಸಿದರು.

ಅರಸು ಸಮುದಾಯ ಬಹಳ ದೊಡ್ಡ ಸುಸಂಸ್ಕೃತ ಸಮುದಾಯ. ಈ ಸಮುದಾಯದವರು ಬಹಳ ಜವಾಬ್ದಾರಿಯುತವಾಗಿ ಆಡಳಿತದ ಪ್ರಗತಿಗೆ ಕೆಲಸ ಮಾಡಿದ್ದಾರೆ. ತಳ, ತುಳಿತ್ತಕ್ಕೆ ಒಳಗಾದ ಸಮುದಾಯದವರಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.

ಈ ದೇಶದಲ್ಲಿ ಅರಸು ಸಮುದಾಯ ಕೇವಲ 40ರಿಂದ 50 ಸಾವಿರ ಇರಬಹುದು, ಸಂಖ್ಯೆ ಮುಖ್ಯವಾಗುವುದಿಲ್ಲ. ಸಮಾಜಕ್ಕೆ, ರಾಜ್ಯಕ್ಕೆ ಎಷ್ಟು ಕೊಡುಗೆ ನೀಡಿದ್ದೇವೆ ಎಂಬುದೇ ಮುಖ್ಯವಾಗುತ್ತದೆ ಎಂದರು.

ಇತಿಹಾಸ ತಜ್ಞ ಡಾ.ಪಿ.ವಿ.ನಂಜರಾಜೇ ಅರಸ್, ಬಹಾದ್ದೂರ್ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ ಬಹದ್ದೂರ್ ಹಾಗೂ ಡಾ.ಎಂ.ಜಿ.ಆರ್.ಅರಸ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಎಂ.ಶಿವಣ್ಣ, ಅನ್ವೇಷಣಾ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಆರ್ಯ ಅಮರನಾಥರಾಜೇ ಅರಸ್ ಇತರರಿದ್ದರು.