Kumaraswamy lacks common sense: Minister Chaluvarayaswamy lashes out.
ಮೈಸೂರು

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ: ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ದಿನಬೆಳಗಾದರೆ ಟಿವಿಗಳ ಮುಂದೆ ಬರ್ತಾರೆ ಅವರಿಗೆ ಮಾಡಲು ಯಾವುದೇ ಕೆಲಸ ಇಲ್ವೇ? ಕೇಂದ್ರದಿಂದ ರಾಜ್ಯಕ್ಕೆ ನೀಡುವ ಬರ ಪರಿಹಾರ ವಿತರಣೆಯಲ್ಲಿ ನಿರಂತರವಾಗಿ ಅನ್ಯಾಯ

ಮೈಸೂರು: ಎಚ್.ಡಿ.ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ. ಅವರು ಇನ್ನು ಮುಂದಾದರೂ ಅವರಿವರನ್ನು ಟೀಕಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕುಟುಕಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದು, 2 ದೊಡ್ಡ ಖಾತೆ ಹೊಂದಿದ್ದಾರೆ. ಆದರೂ ದಿನಬೆಳಗಾದರೆ ಟಿವಿಗಳ ಮುಂದೆ ಬರ್ತಾರೆ. ತಿಂಗಳಲ್ಲಿ 20 ದಿನ ಟಿವಿಗಳ ಮುಂದೆ ಬರ್ತಾರೆ. ಹಾಗಾದರೆ ಅವರಿಗೆ ಮಾಡಲು ಯಾವುದೇ ಕೆಲಸ ಇಲ್ವೇ?

ಪ್ರಧಾನಿ ನರೇಂದ್ರ ಮೋದಿ ಕೆಲಸ ಕೊಟ್ಟಿಲ್ವೇ? ನಾನು ಸಚಿವನಾದ ನಂತರ ಒಂದು ದಿನವೂ ಬಿಡುವು ಸಿಗುತ್ತಿಲ್ಲ. ದಿನದಲ್ಲಿ ಒಂದು ಗಂಟೆಯೂ ಪುರುಸೊತ್ತು ಸಿಗುತ್ತಿಲ್ಲ. ಕುಮಾರಸ್ವಾಮಿ ನನಗಿಂತ ಬ್ಯುಸಿ ಆಗಿರಬೇಕಿತ್ತು. ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ. ನಾನು ಕುಮಾರಸ್ವಾಮಿ ಆಗಲು ಇಷ್ಟವಿಲ್ಲ. ಚಲುವರಾಯಸ್ವಾಮಿ ಆಗಿಯೇ ಇರುತ್ತೇನೆ ಎಂದು ಕಿಡಿಕಾರಿದರು.

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿರುವ ನಾಯಕರು ಮಾತ್ರ ಮಾತಾಡ್ತಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಮಾತಾಡ್ತಿಲ್ಲ ಎಂದು ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಲು ಅವರಿಗೆ ಆಗ್ತಾ ಇಲ್ಲ. ಅವರಿಗೆ ಡಿ.ಕೆ.ಶಿವಕುಮಾರ್, ನನ್ನನ್ನು, ಶಿವಲಿಂಗೇಗೌಡರನ್ನು ನೋಡಲು ಆಗ್ತಿಲ್ಲ. ಶಿವಲಿಂಗೇಗೌಡರು ಜೆಡಿಎಸ್‌ನಲ್ಲೇ ಇದ್ದಿದ್ದರೆ ಬೋರ್ಡ್ ಚೇರ್ಮನ್ ಕೂಡ ಆಗ್ತಿರಲಿಲ್ಲ. ನಾವು ಕಾಂಗ್ರೆಸ್ ಸೇರಿದ ನಂತರ ಕಾಂಗ್ರೆಸ್ಸಿಗರಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಕೇಂದ್ರದಿಂದ ರಾಜ್ಯಕ್ಕೆ ನೀಡುವ ಬರ ಪರಿಹಾರ ವಿತರಣೆಯಲ್ಲಿ ನಿರಂತರವಾಗಿ ಅನ್ಯಾಯ ಆಗಿದೆ. ಕೇಂದ್ರ-ರಾಜ್ಯದಲ್ಲಿ ಎರಡು ಕಡೆಯೂ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹರಿಹಾಯ್ದರು.

ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದೆ. ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆಗಳಲ್ಲಿ ಕೇಂದ್ರ ತಂಡ ಅಧ್ಯಯನ ನಡೆಸಲಿದೆ. ಯಾವ ರೀತಿ ವರದಿ ನೀಡುತ್ತಾರೋ ನೋಡಬೇಕಿದೆ. ಆದರೂ ರಾಜ್ಯ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೇಂದ್ರ ಸರ್ಕಾರ ಪರಿಹಾರ ನೀಡುವ ಬಗ್ಗೆ ಅನುಮಾನವಿದೆ ಎಂದು ಹೇಳಿದರು.

ಎಸ್‌ಐಆರ್ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಆರೋಪ ಪ್ರತ್ಯಾರೋಪವಲ್ಲ. ಅವನು ಅಶೋಕ್ ಮನುಷ್ಯನೇನ್ರೀ. ಡಿಫೆಂಡ್ ಮಾಡ್ಕೋಬೇಕಾದ್ರೆ ಅರ್ಥ ಇರಬೇಕು. ಕರ್ನಾಟಕದ ಒಬ್ಬ ಮತದಾರರಿಗೆ ಅನ್ಯಾಯ ಆಗುತ್ತೇ ಅಂದರೂ ಇವರು ಎಲೆಕ್ಷನ್ ಕಮಿಷನ್ ಪರವಾಗಿ ಮಾತನಾಡ್ತಿದ್ದಾರೆ. ಇವರು ರಾಜ್ಯವನ್ನು ಪ್ರತಿನಿಧಿಸುತ್ತಾರೋ, ಚುನಾವಣಾ ಆಯೋಗ ಅಥವಾ ಕೇಂದ್ರವನ್ನು ಪ್ರತಿನಿಧಿಸುತ್ತಾರೋ ಎಂದು ಪ್ರಶ್ನಿಸಿದರು.

ಬಲ್ಕ್‌ನಲ್ಲಿ ಒಬ್ಬನಿಗೆ 10 ನಮೂನೆ 7ರ ಅರ್ಜಿಯನ್ನು ಕೊಡಲು ಮಾತ್ರ ಅವಕಾಶವಿದೆ. ಒಬ್ಬರಿಗೆ ಸಾವಿರಾರು ನಮೂನೆ ಕೊಟ್ಟಿರುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಅಶೋಕ್ ಮತ್ತು ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದೆಯೇನ್ರಿ. ಯಾರೇ ತಪ್ಪು ಮಾಡಿದ್ದರೂ ತಪ್ಪು ಎಂದು ಹೇಳಬೇಕು. ಪ್ರತಿಪಕ್ಷ ನಾಯಕರಾಗಿರುವ ಅಶೋಕ್, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಏನೇ ಮಾಡಿದರೂ ಸರಿ ಎನ್ನುವವರಿಗೆ, ಮರ್ಯಾದೆ ಇಲ್ಲದವರಿಗೆ ಏನು ಮಾತಾಡಲು ಆಗುತ್ತೇ ಹೇಳಿ ಎಂದು ಖಾರವಾಗಿ ಹೇಳಿದರು.