ಬೆಟ್ಟದಪುರ: ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದು, ಜಾತಿ, ಧರ್ಮ, ಲಿಂಗ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ ಪಾಲಿಸಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಶನಿವಾರ ಆಯೋಜಿಸಿದ್ದ ವಾರ್ಷಿಕ ಶಿಬಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಹನ ಚಾಲನೆ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಮೀಸಲಾತಿ ಉದ್ದೇಶ, ಸಾಮಾಜಿಕ ಸಮಾನತೆ ಹಾಗೂ ಜಾತಿ ಆಧಾರಿತ ತಾರತಮ್ಯದಿಂದ ಉಂಟಾಗುವ ಸಮಸ್ಯೆಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಇಂದಿನ ದಿನಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಯಲ್ಲಿರುವ ಪೋಕ್ಸೊ ಕಾಯ್ದೆಯ ಕುರಿತು ವಿದ್ಯಾರ್ಥಿಗಳು ಜಾಗೃತಿ ಹೊಂದಿರಬೇಕು. ಅಪರಿಚಿತರು ಅಥವಾ ಪರಿಚಯಸ್ಥರಿಂದ ಯಾರಾದರೂ ಅಸಭ್ಯ ವರ್ತನೆ ತೋರಿದರೆ, ಕಿರುಕುಳ ನೀಡಿದರೆ ಅದನ್ನು ಮುಚ್ಚಿಡದೆ ಪಾಲಕರು, ಶಿಕ್ಷಕರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಮಕ್ಕಳು ತಮ್ಮ ದೇಹದ ಸುರಕ್ಷತೆ, ವೈಯಕ್ತಿಕ ಹಕ್ಕುಗಳು ಹಾಗೂ ತಮಗಾಗುವ ಅನ್ಯಾಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಕೌಶಲ್ಯಾದೇವಿ, ಶಿಬಿರಾಧಿಕಾರಿ ಜ್ಯೋತಿ ಪ್ರಸಾದ್, ಸಹ ಶಿಬಿರಾಧಿಕಾರಿ ಮಣಿಕಂಠ, ಉಪನ್ಯಾಸಕರಾದ ರಮೇಶ್, ಸತೀಶ್, ರಾಜು, ಪೂಜಾ, ಸುಮಂತ್, ಸೃಜನ್, ವರ್ಷಿತ್, ಚೈತ್ರಾ, ಕಿರಣ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.