ನಗರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಹಿಳಾ ಸಾಧಕಿಯರಿಗೆ ‘ಶುಭ ಪ್ರೋತ್ಸಾಹ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶುಭಾ ಸಂಜಯ್ ಅರಸ್ ಇತರರಿದ್ದರು.  Efforts should be made to preserve the Kannada language: Dr. Vasundhara Doreswamy's suggestion
ಮೈಸೂರು

ಕನ್ನಡ ಭಾಷೆ ಉಳಿಸುವ ಕೆಲಸವಾಗಲಿ: ಡಾ.ವಸುಂಧರಾ ದೊರೆಸ್ವಾಮಿ ಸಲಹೆ

ಕನ್ನಡ ಓದುಗರ ಒಕ್ಕೂಟದಿಂದ ಕನ್ನಡ ರಾಜ್ಯೋತ್ಸವ

ಮೈಸೂರು: ಕನ್ನಡಿಗರು ಕನ್ನಡ ಭಾಷೆಯನ್ನು ಎಂದೂ ಮರೆಯಬಾರದು. ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹಿರಿಯ ನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಹೇಳಿದರು.

ಕನ್ನಡ ಓದುಗರ ಒಕ್ಕೂಟದ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡನಾಡಿನಲ್ಲೇ ಬಹಳಷ್ಟು ಕನ್ನಡಿಗರು ಕನ್ನಡ ಮಾತನಾಡಲ್ಲ. ಅತಿಯಾಗಿ ಇಂಗ್ಲಿಷ್ ಬಳಕೆ ಮಾಡುತ್ತಾರೆ. ಇದು ಕನ್ನಡಿಗರಿಗೆ ಶೋಭೆ ತರಲ್ಲ. ನಮ್ಮ ನಾಡಿನಲ್ಲಿ ಏಕೆ ಬೇರೆ ಭಾಷೆ ಬಳಕೆ ಮಾಡಬೇಕು? ಎಂದು ಪ್ರಶ್ನಿಸಿದರು.

ಕನ್ನಡ ಭಾಷೆ ಕುರಿತು ಅಭಿಮಾನ, ಹೆಮ್ಮ ಭಾವ ಪ್ರತಿಯೊಬ್ಬ ಕನ್ನಡಿಗರಲ್ಲೂ ಇರಬೇಕು. ಹೊರರಾಜ್ಯ, ವಿದೇಶದಲ್ಲಿ ಇಂಗ್ಲಿಷ್ ಬಳಕೆ ಮಾಡಿ. ಆದರೆ, ಕನ್ನಡಿಗರೊಂದಿಗೆ ವ್ಯವಹರಿಸುವಾಗ ಮತ್ತು ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡಿ ಎಂದು ಹೇಳಿದರು.

ವಿದೇಶದಲ್ಲಿರುವ ಬಹಳಷ್ಟು ಕನ್ನಡಿಗರಿಗೆ ಕನ್ನಡ ಸಂಸ್ಕೃತಿಯ ಜ್ಞಾನವೇ ಇರಲ್ಲ. ಆದರೆ ತಮ್ಮ ಮಕ್ಕಳಿಗೆ ಕನ್ನಡ ಸಂಸ್ಕೃತಿ ಕಲಿಸಲು ಬಲವಂತ ಮಾಡುತ್ತಾರೆ. ಕನ್ನಡ ಭಾಷಿಗರು ಮೊದಲು ಕನ್ನಡಿಗರಾಗಬೇಕು. ಆಗಲೇ ಕನ್ನಡ ಸಂಸ್ಕೃತಿ, ಪರಂಪರೆ ಬೆಳೆಯಲು ಸಾಧ್ಯ ಎಂದರು.

ಸ್ಮಶಾನದಲ್ಲಿ ಗುಂಡಿ ತೆಗೆಯುವ ಶರಣೆ ನೀಲಮ್ಮ, ಆಟೋ ಚಾಲಕಿ ಶ್ವೇತಾ, ಮಹಿಳಾ ಮೆಕಾನಿಕ್ ಸುಮಿತ್ರಾ ಅವರಿಗೆ ‘ಶುಭ ಪ್ರೋತ್ಸಾಹ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಇತರರಿದ್ದರು.