ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸ್ವಾಯತ್ತತೆ ನೀಡುವುದಲ್ಲದೇ ಜನರಿಂದ ಸಂಗ್ರಹಿಸುವ ಗ್ರಂಥಾಲಯ ತೆರಿಗೆ (ಸೆಸ್) ಅನ್ನು ಪ್ರಾಧಿಕಾರಕ್ಕೆ ನೀಡುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸಲು ಸಹಕಾರ ನೀಡಬೇಕು ಎಂದು ಹೆಸರಾಂತ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ, ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮಹೋತ್ಸವ ಸಮಿತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಪುಸ್ತಕ ಮೇಳದಲ್ಲಿ ವಿವಿಧ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಂಥಾಲಯ ಸೆಸ್, ಪುಸ್ತಕಗಳಿಗೆ ತೆರಿಗೆ ವಿಧಿಸಿ ಸರ್ಕಾರ ಜನರಿಂದ ಸ್ಥಳೀಯ ಸಂಸ್ಥೆಗಳ ಮೂಲಕ ಹಣ ಸಂಗ್ರಹ ಮಾಡುತ್ತಿದೆ. ಹೀಗೆ ಸಂಗ್ರಹವಾಗುವ ಪುಸ್ತಕ ಕರವನ್ನು ಪುಸ್ತಕ ಸಂಸ್ಕೃತಿ ಬೆಳೆಸಲು ಮಾತ್ರವೇ ಬಳಸುವಂತಾಗಬೇಕು. ಇದರಿಂದ ಪುಸ್ತಕ ಸಂಸ್ಕೃತಿ ಬೆಳೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಶಾಸನಬದ್ಧ ಅಧಿಕಾರ ನೀಡುವ ಮೂಲಕ ಪ್ರಾಧಿಕಾರಕ್ಕೆ ಬಲ ತುಂಬುವ ಅಗತ್ಯ ತುಂಬ ಇದೆ ಎಂದು ಹೇಳಿದರು.
ವಿದೇಶಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸಲು ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ಆಗುತ್ತಿವೆ. ಅಲ್ಲಿನ ಜನರ ಪುಸ್ತಕ ಪ್ರೇಮ ನಮಗೆ ಮಾದರಿಯಾಗಬೇಕು. ಎಲ್ಲೆಡೆ ಈಗ ಯುದ್ಧದ ಆತಂಕ ಮನೆ ಮಾಡುತ್ತಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಪುಸ್ತಕಗಳು ಸಂಪೂರ್ಣನಾಶವಾಗುತ್ತವೆ. ಹಾಗಾಗಿ ಈಜಿಪ್ಟ್ ದೇಶದಲ್ಲಿ ಮುಂದಿನ ಪೀಳಿಗೆಗಾಗಿ ಪುಸ್ತಕಗಳನ್ನು ಸಂರಕ್ಷಿಸಲು ಯುದ್ಧ ಬಂಕರ್ಗಳಂತೆ ಪುಸ್ತಕಗಳನ್ನು ಇಡಲು ಬಂಕರ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಭಾರತದಲ್ಲಿ ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಆದರೆ ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಅಗಾಧವಾಗಿದೆ. ಪುಸ್ತಕ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಡಿಜಿಟಲ್ ಕೂಡಾ ರೂಪಾಂತರಗೊಂಡ ಪುಸ್ತಕವನ್ನಾಗಿ ಪರಿಗಣಿಸಬೇಕು. ಪುಸ್ತಕ ಸಂಸ್ಕೃತಿ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಚಾರ ಮಾಡುವುದರ ಮೂಲಕ ಪುಸ್ತಕ ಸಂಸ್ಕೃತಿಯನ್ನು ಯುವ ಪೀಳಿಗೆಯಲ್ಲಿ ಬಿತ್ತುವ ಮಹತ್ವದ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಾಹಿತಿ ಡಾ. ಅರವಿಂದ ಮಾಲಗತ್ತಿ ಮಾತನಾಡಿ, ಸಾಹಿತ್ಯ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಬಲವಾದ ಅಸ್ತ್ರ. ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಲೇಖಕರು ಮತ್ತು ಓದುಗರು ಯಶಸ್ವಿಯಾದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಬಹುದಾಗಿದೆ ಎಂದು ತಿಳಿಸಿದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಮನೆಗೊಂದು ಗ್ರಂಥಾಲಯ ಯೋಜನೆಯ ಮೂಲಕ ದೊಡ್ಡ ಮಟ್ಟದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸಲು ಪ್ರಯತ್ನ ಮಾಡುತ್ತಿದ್ದೇನೆ. ಜನರು ಪುಸ್ತಕಗಳನ್ನು ಕೊಂಡು ಓದಬೇಕು ಪ್ರತಿಯೊಂದು ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಸೃಷ್ಟಿಯಾದರೆ ಲೇಖಕ ಪ್ರಕಾಶಕ ,ಮಾರಾಟಗಾರ, ಮುದ್ರಕ ಹೀಗೆ ಒಂದು ಪ್ರಕಾಶನ ಜಾಲವೇ ಉದ್ಧಾರವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ವಿ.ನಾಗರಾಜ ಮೂರ್ತಿ, ಬಸವರಾಜ ಸಬರದ, ಮಾರ್ಕಂಡಪುರಂ ಶ್ರೀನಿವಾಸ್, ಚಂದ್ರಮತಿ ಸೋಂದಾ, ಮುರಳಿ ಕೂಡ್ಲೂರು, ಶಿವಾನಂದ ಲ.ಪಾಚಂಗಿ, ಕೆ.ಆರ್.ನಂದಿನಿ, ಸಿ ಚಂದ್ರಪ್ಪ, ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ಸಿಂಗ್ ಇತರರು ಇದ್ದರು.