ಮೈಸೂರು: ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಗಳ ಒಕ್ಕೂಟ, ಅಲಯನ್ಸ್ ಕ್ಲಬ್ ಆಫ್ ಮೈಸೂರು ರಾಧಾಕೃಷ್ಣದಿಂದ ಕನ್ನಡ ರಾಜ್ಯೋತ್ಸವ, ಶಿಕ್ಷಕರ ಮತ್ತು ಅಭಿಯಂತರರ ದಿನಾಚರಣೆ ಅಂಗವಾಗಿ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೂಟಗಳ್ಳಿಯ ಶ್ರೀ ಅನಂತೇಶ್ವರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅಲಯನ್ಸ್ ಜಿಲ್ಲಾ ಪ್ರಾಂತಪಾಲ ಮಹಾಬಲೇಶ್ವರ ಬೈರಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಕನ್ನಡ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು.
ಸಮಾಜದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಸೇವೆ ಅನನ್ಯವಾದದ್ದು. ಶಿಕ್ಷಕರು ಮತ್ತು ಇಂಜಿನಿಯರ್ಗಳು ರಾಷ್ಟ್ರ ನಿರ್ಮಾಣದ ಎರಡು ಪ್ರಮುಖ ಶಕ್ತಿಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಮಾಜದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಅಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲಯನ್ಸ್ ಕ್ಲಬ್ ಆಫ್ ಮೈಸೂರು ರಾಧಾಕೃಷ್ಣದ ಅಧ್ಯಕ್ಷ ಆರ್.ರಘು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಶಿಕ್ಷಕ ಬಾಲಕೃಷ್ಣಯ್ಯ ಮಾತನಾಡಿ, ಕನ್ನಡ ಭಾಷೆಯ ಮಹತ್ವ, ಶಿಕ್ಷಕರ ಜವಾಬ್ದಾರಿ ಮತ್ತು ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರದ ಕುರಿತು ಮಾತನಾಡಿದರು.
ಸಂಸ್ಥೆಯ ಜಿಲ್ಲಾ ಮಾಜಿ ಪ್ರಾಂತಪಾಲ ಬಾಲಕೃಷ್ಣರಾಜು (ಸಿರಿಬಾಲು), ಮೊದಲನೆಯ ಉಪ ಪ್ರಾಂತಪಾಲ ಡಾ. ನ. ಗಂಗಾಧರಪ್ಪ, ಎರಡನೇ ಉಪ ಪ್ರಾಂತಪಾಲ ಶಾಲಿನಿ ಬೈರಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಶ್ರೀೀಶೈಲ, ಜಿಲ್ಲಾ ಖಜಾಂಚಿ ಶೋಭಾ ಸಿರಿಬಾಲು, ಪ್ರಾಂತೀಯ ಅಧ್ಯಕ್ಷ ಡಿ. ಮಹದೇವ, ವಲಯ ಅಧ್ಯಕ್ಷ ವಿ. ವೆಂಕಟೇಶ್, ಕ್ಲಬ್ ಕಾರ್ಯದರ್ಶಿ ಸಿ. ಚಿಕ್ಕಣ್ಣ, ಖಜಾಂಚಿ ಎಸ್.ಎನ್. ರವಿನಾಥ್ ಇತರರಿದ್ದರು.
ಶಿಕ್ಷಕರು ಹಾಗೂ ಸಾಧಕರಿಗೆ ಶಿಕ್ಷಕ ಸೇವಾರತ್ನ ಪ್ರಶಸ್ತಿ ಮತ್ತು ಸೇವಾರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.