ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ಉದ್ಘಾಟಿಸಿದರು. ಎಪಿಪಿ ಹರಿಣಾಕ್ಷಿ, ಎಸ್.ಶಿವಣ್ಣೇಗೌಡ, ಕೆ.ಎಸ್.ನಟರಾಜ್ ಇತರರಿದ್ದರು. 
ಮೈಸೂರು

ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ಸಿಗಲಿ

ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಅನಿತಾ ಆಶಯ

ಹುಣಸೂರು : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ದೇಶದ ಕಾನೂನಿನ ಮೂಲಕ ನ್ಯಾಯ ಒದಗಿಸಬೇಕೆನ್ನುವುದೇ ಕಾನೂನು ಸೇವಾ ಪ್ರಾಧಿಕಾರಗಳ ಪ್ರಮುಖ ಗುರಿಯಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಅನಿತಾ ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಶಾಲ ಶಿಕ್ಷಣ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ನಮಗೆ ರಕ್ಷಣೆ ನೀಡಿದೆ, ಅದು ಹಕ್ಕನ್ನೂ ನೀಡಿದೆ, ನಿರ್ವಹಿಸಬೇಕಾದ ಕರ್ತವ್ಯವನ್ನೂ ತಿಳಿಸಿದೆ. ಸಂವಿಧಾನದಡಿಯಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ರಚಿಸಿಕೊಂಡಿದ್ದೇವೆ. ನ್ಯಾಯ ಪಡೆಯುವ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿ ನ್ಯಾಯ ಪಡೆದುಕೊಳ್ಳಲು ಶಕ್ತರಾಗದ ಸಮುದಾಯಗಳಾದ ಬರಪೀಡಿತ ಪ್ರದೇಶದ ಜನರು, ನೆರೆಪೀಡಿತ ಪ್ರದೇಶದ ಜನರು, ಪರಿಶಿಷ್ಟ ಜಾತಿ, ಜನಾಂಗ, ವಾರ್ಷಿಕ 3 ಲಕ್ಷ ರೂ.ಗೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ನ್ಯಾಯಾಲಯದ ಆದೇಶದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ರಚಿಸಲಾಗಿದೆ ಎಂದರು.

ಈ ಸಮುದಾಯಗಳಿಗೆ ನ್ಯಾಯ ಒದಗಿಸಲು ಉಚಿತ ಕಾನೂನು ನೆರವನ್ನು ಆಯಾ ರಾಜ್ಯ, ಜಿಲ್ಲೆ ಮತ್ತು ತಾಲೂಕು ಸಮಿತಿಗಳು ಕರ್ತವ್ಯ ನಿರ್ವಹಿಸುತ್ತವೆ. ಯಾವೊಬ್ಬ ನಾಗರಿಕನೂ ತನಗೆ ಕಾನೂನು ತಿಳಿದಿಲ್ಲ, ಕ್ಷಮಿಸಿ ಎಂದು ಕೇಳುವಂತಿಲ್ಲ. ಕಾನೂನಿನ ಕನಿಷ್ಟ ಜ್ಞಾನವನ್ನಾದರೂ ಹೊಂದಿರಬೇಕೆಂದು ಸಮಿತಿಯು ಕಾನೂನಿನ ಅರಿವು ಮತ್ತು ನೆರವಿನ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಾಗಿ ನೀವು ಕೂಡ ದೇಶದ ಸಂವಿಧಾನ ಮತ್ತು ಕಾನೂನಿನ ಅರಿವು ಮೂಡಿಸಿಕೊಳ್ಳಿರಿ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕಾಳನಾಯಕ ಮಾತನಾಡಿದರು. ಎಪಿಪಿ ಹರಿಣಾಕ್ಷಿ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಜೆ.ಸಂದೀಪ್, ಪ್ರಾಧ್ಯಾಪಕ ಕೆ.ಎಸ್.ನಟರಾಜ್ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು. ಪ್ಯಾನೆಲ್ ವಕೀಲರಾದ ಎಸ್.ವೆಂಕಟೇಶ್ ಕಾನೂನು ಸೇವೆಗಳ ಸಂಸ್ಥೆಗಳು ಮತ್ತು ಚಟುವಟಿಕೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.