ಮೈಸೂರು: ಎಸ್‌ಐಆರ್ ಅಕ್ರಮದ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಪ್ರತ್ಯೇಕ ತನಿಖೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ಅವರು, ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಹೆಲಿಪ್ಯಾಡ್‌ನಲ್ಲಿ ಮಾತನಾಡಿದರು.
ಚುನಾವಣಾ ಆಯೋಗವೇ ಈ ಬಗ್ಗೆ ಈಗ ತನಿಖೆ ಮಾಡುತ್ತಿದೆ. ಎಲ್ಲಿಂದ ಅರ್ಜಿ ನಮೂನೆಗಳು ಮುದ್ರಣವಾಗಿವೆ. ಹೇಗೆ ಬಿಜೆಪಿ ಕೈಗೆ ತಲುಪಿದವು ಎಂಬುದೆಲ್ಲ ಗೊತ್ತಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸತ್ಯ ದರ್ಶನ ಆಗಿದೆ. ಅವರು ಏನೇನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಆಮೇಲೆ ನಮ್ಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ. ಯಾವ ಕಾನೂನನ್ನೂ ನಾನು ಉಲ್ಲಂಘಿಸಿಲ್ಲ. ಸಮಸ್ಯೆ ಆಗಿರುವುದನ್ನು ಕಾನೂನಾತ್ಮಕವಾಗಿ ಆಯುಕ್ತರ ಗಮನಕ್ಕೆ ತಂದಿದ್ದು, ಇದರಲ್ಲಿ ತಪ್ಪೇನಿದೆ? ಅವರು ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ಸಮಯ ಕೇಳಿದರು. ಇದಕ್ಕೆಲ್ಲ ಏಕೆ ಸಮಯ ಎಂದು ನಾವು ಅಲ್ಲೇ ಕುಳಿತಿದ್ದವು. ಕೊನೆಗೂ ಪರಿಹಾರ ಸಿಕ್ಕಿದೆ. ಇದರಲ್ಲಿ ಧರಣಿ ಪ್ರಶ್ನೆ ಎಲ್ಲಿಂದ ಬಂತು? ನಾನು ಜನರ ಪ್ರತಿನಿಧಿಯಾಗಿ ಆಯುಕ್ತರ ಮುಂದೆ ಸಮಸ್ಯೆ ಹೇಳಿದ್ದು, ಇದರಲ್ಲಿ ಯಾವ ತಪ್ಪು ಇದೆ? ಎಂದು ಪ್ರಶ್ನಿಸಿದರು.
ನಾನು ತಪ್ಪು ಮಾಡಿದರೆ ನನ್ನ ವಿರುದ್ಧ ಕೇಸ್ ಹಾಕಲಿ. ಬಿಜೆಪಿಯವರು ಮೇಲಿನವರ ಒತ್ತಡದಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ನನ್ನಿಂದ ಶಾಂತಿ ಭಂಗ ಆಗಿದ್ದರೆ, ಕಾನೂನು ಉಲ್ಲಂಘನೆಯಾದ್ದರೆ ನನ್ನ ವಿರುದ್ಧವೂ ಕೇಸ್ ಹಾಕಲಿ. ಬಿಜೆಪಿಯವರು ರಾಜಕೀಯಕ್ಕೆ ಮಾತನಾಡುತ್ತಿದ್ದಾರೆ. ಮಾತನಾಡುವುದು ಬಿಜೆಪಿಗೆ ಅನಿವಾರ್ಯ ಮಾತನಾಡಲಿ ಎಂದು ಟೀಕಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡದ ಸಿಎಂ, ನೈಸ್ ವಿಚಾರದಲ್ಲಿ ಯಾರು ಏನಾದರು ಹೇಳಲಿ ಎಲ್ಲದಕ್ಕೂ ಈ ದೇಶದಲ್ಲಿ ಕಾನೂನು ಇದೆ. ಕಾನೂನು ಯಾರದ್ದು ತಪ್ಪು, ಯಾರದ್ದು ಸರಿ ಎಂದು ತೀರ್ಮಾನ ಮಾಡುತ್ತದೆ. ಎಲ್ಲದಕ್ಕೂ ಪ್ರತಿಕ್ರಿಯೆ ಕೊಟ್ಟು ವಿಚಾರವನ್ನು ಡೈವರ್ಟ್ ಮಾಡುವುದಿಲ್ಲ. ಎಲ್ಲದಕ್ಕೂ ಕಾನೂನು ಉತ್ತರ ಕೊಡುತ್ತದೆ. ಆ ವಿಚಾರದ ಚರ್ಚೆ ಈಗ ಬೇಡ ಎಂದು ಹೇಳಿದರು.
ಜಂಬೂ ಸವಾರಿ ಮೆರವಣಿಗೆಯಲ್ಲಿ ಸಿನಿಮಾ ಕಲಾವಿದರು ಭಾಗಿಯಾಗಲಿದ್ದು, ಇದು ನನ್ನ ಕನಸು ಎಂಬುದು ಏನು ಇಲ್ಲ. ಹೊಸತನ ಬರಬೇಕೆಂಬುದು ನನ್ನ ಆಸೆ ಎಂದರು.
ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಹೊರ ರಾಜ್ಯದ ಸ್ತಬ್ಧಚಿತ್ರಗಳಿಗೆ ಅವಕಾಶ ಕೊಡಲಾಗುವುದು. ಸ್ತಬ್ಧ ಚಿತ್ರಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದು, ಅದು ಶೀಘ್ರದಲ್ಲಿ ತೀರ್ಮಾನ ಆಗುತ್ತದೆ. ಹೊರ ರಾಜ್ಯದ ಸಿಎಂಗಳಿಗೂ ಆಹ್ವಾನ ಕೊಟ್ಟಿದ್ದು, ಯಾರ‌್ಯಾರು ಬರುತ್ತಾರೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ನಮ್ಮ ರಾಜ್ಯದ ನೀರು ಹೊರ ರಾಜ್ಯಕ್ಕೆ ಹೋಗುತ್ತದೆ.
ನಮ್ಮ ತರಕಾರಿ ಹೊರ ರಾಜ್ಯಕ್ಕೆ ಹೋಗುತ್ತದೆ. ನಮ್ಮ ಭರತನಾಟ್ಯವನ್ನು ವಿದೇಶದಲ್ಲಿ ಮಾಡುತ್ತಾರೆ. ಪಕ್ಕದ ರಾಜ್ಯದ ಕಲೆಯನ್ನು ನಮ್ಮದರಲ್ಲಿ ಬಿಂಬಿಸುವುದು ಬೇಡವೇ? ಅದೇ ಪ್ರಯತ್ನ ನಡೆದಿದೆ. ವೈಮಾನಿಕ ಪ್ರದರ್ಶನಕ್ಕಾಗಿ ರಕ್ಷಣಾ ಸಚಿವಾಲಯಕ್ಕೂ ಮನವಿ ಮಾಡಲಾಗಿದೆ. ಎಲ್ಲವೂ ಅಂತಿಮವಾಗುತ್ತಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
125 ವರ್ಷಗಳಲ್ಲಿ ಈ ರೀತಿಯ ಬರ ಯಾವತ್ತು ಬಂದಿರಲಿಲ್ಲ. ಅದನ್ನು ಕೇಂದ್ರದ ತಂಡಕ್ಕೆ ಗಮನಕ್ಕೆ ತಂದಿದ್ದು, ಅವರ ಜತೆಗೆ ಶನಿವಾರ ಒಂದು ಗಂಟೆ ಸಭೆ ನಡೆಸಿದ್ದು, ನಮ್ಮ ಪರಿಸ್ಥಿತಿಯನ್ನ ವಿವರಿಸಲಾಗಿದೆ. ಮೂರು ತಂಡಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರವಾಸ ಮಾಡುತ್ತಾರೆ. ಸೌಹಾರ್ದಯುತವಾಗಿ ಪರಿಹಾರಕ್ಕಾಗಿ ಪಡೆಯಬೇಕೆಂಬುದು ನಮ್ಮ ಆಸೆ. ಅದಕ್ಕಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದು, ನಾನು ಅವಸರದಲ್ಲಿ ಹೆಜ್ಜೆ ಇಡುವುದಿಲ್ಲ. ಹೆಚ್ಚು ಪರಿಹಾರ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಡಿಕೆಶಿ ತಿಳಿಸಿದರು.