ನಗರದ ಚಾಮುಂಡಿಬೆಟ್ಟ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಕಾಸ್ಮೋಸ್ ತಾರಾಲಯ ಉದ್ಘಾಟನಾ ಕಾರ್ಯಕ್ರಮ Planetariums in four more districts: Statement by CM D.K. Shivakumar
ಮೈಸೂರು

ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ತಾರಾಲಯ : ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಧಾರವಾಡ, ಕೊಡಗು, ಬೆಳಗಾವಿ, ಬಾಗಲಕೋಟೆಯಲ್ಲೂ ನಿರ್ಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ಸೌಲಭ್ಯ ವಿಸ್ತರಣೆ

ಮೈಸೂರು: ಧಾರವಾಡ, ಕೊಡಗು, ಬೆಳಗಾವಿ ಮತ್ತು ಬಾಗಲಕೋಟೆಯಲ್ಲೂ ತಾರಾಲಯಗಳು ನಿರ್ಮಾಣವಾಗುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಷ್ಟು ಪ್ರದೇಶಗಳಿಗೆ ಇಂತಹ ಸೌಲಭ್ಯ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಚಾಮುಂಡಿಬೆಟ್ಟ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಕಾಸ್ಮೋಸ್ ತಾರಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೂ ಇಂತಹ ಅತ್ಯಾಧುನಿಕ ಸೌಲಭ್ಯಗಳ ಅನುಭವ ದೊರೆಯಬೇಕು. ಅದಕ್ಕಾಗಿ ಕಾಸ್ಮೋಸ್ ಮಾದರಿಯ ವಿಜ್ಞಾನ ಮತ್ತು ತಾರಾಲಯ ಸೌಲಭ್ಯ ಸ್ಥಾಪಿಸುವ ಸಾಧ್ಯತೆ ಪರಿಶೀಲಿಸುವಂತೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪರಂಪರೆ, ಜ್ಞಾನ, ಸಂಸ್ಕೃತಿಗೆ ಹೆಸರಾದ ಮೈಸೂರಿಗೆ ಈ ತಾರಾಲಯ ಮತ್ತೊಂದು ಮಹತ್ವದ ವೈಜ್ಞಾನಿಕ ಹೆಗ್ಗುರುತು. ಈ ಯೋಜನೆಯನ್ನು ಮೈಸೂರಿಗೆ ತರಲು ನೆರವಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಎಂದರು.

ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಇತಿಹಾಸದಲ್ಲಿ ಕರ್ನಾಟಕದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಭಾರತದ ಮೊದಲ ಉಪಗ್ರಹ ಆರ್ಯಭಟದಿಂದ ಹಿಡಿದು ಚಂದ್ರಯಾನ, ಆದಿತ್ಯ ಎಲ್-1, ಗಗನಯಾನ ಯೋಜನೆಯವರೆಗೆ ಕರ್ನಾಟಕದ ಪಾತ್ರ ಮಹತ್ವದ್ದು.

ಬೆಂಗಳೂರು ಭಾರತದ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ. ಯುಆರ್‌ಎಸ್‌ಸಿ, ಇಸ್ರೋನಂತಹ ಪ್ರಮುಖ ಸಂಸ್ಥೆಗಳು ದೇಶದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಮೇಕೆದಾಟು ಯೋಜನೆ ತಡೆ ಯಾರಿಂದಲೂ ಸಾಧ್ಯವಿಲ್ಲ

ಮೇಕೆದಾಟು ಜಲಾಶಯ ಯೋಜನೆ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ಅವರನ್ನು ಕೋರಿದರು.

ಮೇಕೆದಾಟು ಜಲಾಶಯ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ರಾಜ್ಯದ ಪರವಾಗಿ ತೀರ್ಪು ನೀಡಿದ್ದು, ಕಾನೂನಾತ್ಮಕವಾಗಿ ಈ ವಿಚಾರ ಇತ್ಯರ್ಥಗೊಂಡಿದೆ. ಕುಡಿಯುವ ನೀರಿನ ಮಹತ್ವದ ಯೋಜನೆಗೆ ವಿಳಂಬ ಮಾಡದೆ ಕೇಂದ್ರ ಸರ್ಕಾರ ಅಂತಿಮ ಶಾಸನಬದ್ಧ ಅನುಮೋದನೆ ನೀಡಬೇಕು ಎಂದು ವಿನಂತಿಸಿದರು.

ಕಸ್ತೂರಿರಂಗನ್ ವರದಿಯ ಶಿಫಾರಸುಗಳಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ವಿಧಾನಮಂಡಲವು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ಈ ಸಂಬಂಧ ತೊಂದರೆಗೆ ಒಳಗಾಗುವ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಸಾರ್ವಜನಿಕರೊಂದಿಗೆ ವ್ಯಾಪಕ ಚರ್ಚೆ ನಡೆಸಲಾಗಿದೆ. ಅಲ್ಲಿನ ಜನರ ಭಾವನೆ, ಬದುಕಿನ ವಾಸ್ತವಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಸ್ಥಳೀಯ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕಸ್ತೂರಿರಂಗನ್ ವರದಿಯ ಶಿಫಾರಸು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದೂ ಕೋರಿದರು.

ನಗರ ಪ್ರದೇಶಗಳಿಗೆ ವಲಸೆ ತಡೆಗಟ್ಟಲು, ಪ್ರತಿ ಗ್ರಾಮೀಣ, ನಗರ ಪ್ರದೇಶದ ಮಗು ಉತ್ತಮ ಶಿಕ್ಷಣ ಪಡೆಯಲು ರಾಜ್ಯ ಸರ್ಕಾರದ ಸಿಎಸ್‌ಆರ್ ನೀತಿಯನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಿಎಸ್‌ಆರ್ ಯೋಜನೆಗಳನ್ನು ಕರ್ನಾಟಕದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸುವಂತೆ ಸಲಹಾ ಸೂಚನೆ ಹೊರಡಿಸಬೇಕು ಎಂದರು.

ರಾಜ್ಯದ ಅಭಿವೃದ್ಧಿ ಹಾಗೂ ಸವಾಲುಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ ಅತ್ಯಗತ್ಯವಿದೆ. ಮೂರು ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.