ನಂಜನಗೂಡು: ಮಹಿಳೆಯರಿಂದ ಮಹಿಳೆಯರಿಗಾಗಿಯೇ ಇನ್ನರ್‌ವೀಲ್ ಸಂಸ್ಥೆ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲೂ ತಮ್ಮ ಛಾಪನ್ನು ಮೂಡಿಸುರುವುದು ಹೆಗ್ಗಳಿಕೆ ವಿಷಯ ಎಂದು ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷೆ ಗೌತಮಿ ಶೇಖರ್ ತಿಳಿಸಿದರು.
ಶನಿವಾರ ಸಂಜೆ ನಗರದ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ 318 ಜಿಲ್ಲಾಧ್ಯಕ್ಷರ ಭೇಟಿ ಹಾಗೂ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮೀಣ ಸೊಗಡಿನ ಆಟಗಳು ಕಣ್ಮರೆಯಾಗುತ್ತಿದೆ. ನಮ್ಮ ಮಣ್ಣಿನ ಆಟಗಳಾದ ಕುಂಟೆಬಿಲ್ಲೆ, ಚೌಕಾಬಾರ, ಕಣ್ಣಾ ಮುಚ್ಚಾಲೆ, ಹಗ್ಗ ಜಗ್ಗಾಟ, ಆಣೆಕಲ್ಲು, ಗೋಲಿ ಆಟಗಳು ಅವನತಿಯ ಅಂಚಿನಲ್ಲಿದೆ. ಅವುಗಳನ್ನು ಪೋಷಿಸಿ ಬೆಳೆಸಬೇಕಾದದ್ದು ಇಂದಿನ ಯುವ ಜನಾಂಗದ ಕರ್ತವ್ಯವಾಗಿದೆ. ನಮ್ಮ ಪೂರ್ವಿಕರು ಇಂತಹ ಆಟಗಳನ್ನು ಆಡಿಕೊಂಡೆ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಅಂದಿನ ಕಾಲದಲ್ಲಿ ಮೊಬೈಲ್, ಸಿನಿಮಾ ಯಾವುದೇ ಮನರಂಜನೆ ಇಲ್ಲದ ಸಮಯದಲ್ಲಿ ಇಂತಹ ಗ್ರಾಮೀಣ ಕ್ರೀಡೆಗಳೇ ಅವರಿಗೆ ಕಾಲ ಕಳೆಯುವ ಮಾರ್ಗವಾಗಿತ್ತು. ನಮ್ಮ ಇನ್ನರ್‌ವೀಲ್ ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಶಾಲಾ ಮತ್ತು ಕಾಲೇಜು ಮಟ್ಟಗಳಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಸಂಸ್ಥೆಯ 318 ಜಿಲ್ಲಾಧ್ಯಕ್ಷೆ ರಜನೀಶ್ ಭಟ್ ಮಾತನಾಡಿ, ಮಹಿಳೆಯರು ಒಗ್ಗೂಡಿಕೊಂಡು ಸಮಾಜ ಸೇವೆಗೆ ಕಟ್ಟಿಬದ್ಧವಾಗಿರುವುದು ಹೆಮ್ಮೆಯ ವಿಷಯ. ಸಂಸ್ಥೆಯಲ್ಲಿ ಸೇವಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇನ್ನರ್‌ವೀಲ್ ಸಂಸ್ಥೆಯು ಸೇವೆಗೆ ಹೆಸರುವಾಸಿಯಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿನಿಯರಿಗೆ ನಮ್ಮ ಸೇವೆಗಳು ಮೀಸಲಿರುತ್ತದೆ. ವಿದ್ಯಾರ್ಥಿನಿಯರಿಗೆ ಕ್ರೀಡೆಯಲ್ಲಿ ಮುಂದುವರಿಯಲು ಸಹಕಾರ ನೀಡುತ್ತೇವೆ ಎಂದರು.
ಅಂಗವಿಕಲ ವ್ಯಕ್ತಿಗೆ ಸುಮಾರು 20 ಸಾವಿರ ರೂ. ಮೌಲ್ಯದ ಸೈಕಲ್ ಹಾಗೂ ಸರ್ಕಾರಿ ಶಾಲೆಗೆ 25 ಸಾವಿರ ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸ್ಥೆ ವತಿಯಿಂದ ಹಸ್ತಾಂತರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ವಿನುತಾ ಶಶಿಧರ್, ಖಜಾಂಚಿ ಪೂರ್ಣಿಮಾ ಮಲ್ಲೇಶ್, ಕಲ್ಪನಾ ರೇವಣ್ಣ, ಎಡಿಟರ್ ಶಿಲ್ಪಾ ಪ್ರಸನ್ನ, ರೋಟರಿ ಸಂಸ್ಥೆ ಅಧ್ಯಕ್ಷ ಪುಟ್ಟರಾಜು, ರೋಟರಿ ಸದಸ್ಯರಾದ ಚಂದ್ರು, ಶ್ರೀಕಂಠ, ಪ್ರಸಾದ್, ರಾಮಚಂದ್ರ ಉಪಸ್ಥಿತರಿದ್ದರು.