ಮೈಸೂರು: ಇಂಜಿನಿಯರಿಂಗ್ ಕೇವಲ ಉದ್ಯೋಗ, ವೃತ್ತಿಯಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ ಎಂದು ಅಭಿಯಂತರರು ಸಂಕಲ್ಪ ಮಾಡಬೇಕಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇಂಜಿನಿಯರ್‌ಗಳ ಸಂಸ್ಥೆಯ ಮೈಸೂರು ಶಾಖೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ 41ನೇ ರಾಷ್ಟ್ರೀಯ ಸಿವಿಲ್ ಇಂಜಿನಿಯರ್‌ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಪ್ರತಿಯೊಂದು ಸೌಲಭ್ಯದ ಹಿಂದೆಯೂ ಸಾವಿರಾರು ಇಂಜಿನಿಯರ್‌ಗಳ ಜ್ಞಾನ, ಕಠಿಣ ಪರಿಶ್ರಮ, ಯೋಜನೆ, ಹೊಣೆಗಾರಿಕೆ ಅಡಗಿದೆ. ಹೀಗಾಗಿ, ಇಂಜಿನಿಯರ್ ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ. ಇಂಜಿನಿಯರ್ ಎಂದರೆ ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಹೀಗಾಗಿ ಸುಭದ್ರ ಭವಿಷ್ಯ ನಿರ್ಮಾಣದಲ್ಲಿ ಅವರ ಸಮರ್ಪಣಾ ಮನೋಭಾವ ಇದೆ ಎಂದರು.
ಜ್ಞಾನ ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವುದು ಅಷ್ಟೇ ಪ್ರಮುಖ. ನಿತ್ಯವೂ ಸಂಚರಿಸುವ ರಸ್ತೆ, ಸೇತುವೆ, ಮನೆ ಬಾಗಿಲಿಗೆ ಬರುವ ನೀರು, ವಿದ್ಯುತ್ ಹಾಗೂ ಅಂಗೈಯಲ್ಲಿರುವ ಮೊಬೈಲ್ ಇವೆಲ್ಲವೂ ಜೀವನದ ಸಹಜ ಭಾಗವೆನಿಸಬಹುದು. ಆದರೆ, ಈ ಪ್ರತಿಯೊಂದು ಸೌಲಭ್ಯದ ಹಿಂದೆಯೂ ಸಾವಿರಾರು ಇಂಜಿನಿಯರ್‌ಗಳ ಶ್ರಮ ಇದೆ ಎಂದು ಹೇಳಿದರು.
ಬೆಂಗಳೂರು ಆಚೆಯೂ ರಾಜ್ಯ ಪ್ರಗತಿ ಸಾಧಿಸಬೇಕಿದೆ. ಕಟ್ಟಕಡೆಯ ಗ್ರಾಮಕ್ಕೂ ತಂತ್ರಜ್ಞಾನ, ಸೌಲಭ್ಯ ತಲುಪಿದಾಗಲೇ ನಿಜವಾದ ಅಭಿವೃದ್ಧಿ ಸಾಧ್ಯ. ಜಗತ್ತು ತ್ವರಿತಗತಿಯಲ್ಲಿ ಪರಿವರ್ತನೆಯಾಗುತ್ತಿದ್ದು, ಕೃತಕ ಬುದ್ಧಿಮತ್ತೆ (ಎಐ), ರೊಬಾಟಿಕ್ಸ್, ಸೆಮಿಕಂಡಕ್ಟರ್, ಹಸಿರು ಇಂಧನ, ಎಲೆಕ್ಟ್ರಿಕ್ ವಾಹನ, ಬಾಹ್ಯಾಕಾಶ ತಂತ್ರಜ್ಞಾನ ಜನಬದುಕಿನ ದಿಕ್ಕನ್ನೇ ಬದಲಿಸುತ್ತಿವೆ. ಈ ನೂತನ ತಾಂತ್ರಿಕ ಯುಗದಲ್ಲಿ ಕರ್ನಾಟಕದ ಪಾತ್ರ ಅಗ್ರಗಣ್ಯವಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಲ್ಲಿ ಅಪಾರ ಪ್ರತಿಭೆ, ಹೊಸ ಆಲೋಚನೆ, ಕನಸುಗಳಿವೆ. ಅವುಗಳಿಗೆ ಆಧುನಿಕ ತಂತ್ರಜ್ಞಾನದ ಬಲ ತುಂಬುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ಬೃಹತ್ ಯೋಜನೆಗಳಷ್ಟೇ ಅಲ್ಲ, ರೈತನ ಜಮೀನಿಗೆ ಸಕಾಲದಲ್ಲಿ ನೀರು ಒದಗಿಸುವುದು, ವಿದ್ಯಾರ್ಥಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ಹಾಗೂ ಯುವಜನತೆಗೆ ಕೌಶಲ ಆಧಾರಿತ ಉದ್ಯೋಗಾವಕಾಶ ಕಲ್ಪಿಸುವುದೇ ನೈಜ ಪ್ರಗತಿ. ಇಂತಹ ಪ್ರತಿಯೊಂದು ಜನಪರ ಅಭಿವೃದ್ಧಿಯ ಹೆಜ್ಜೆಯಲ್ಲೂ ಇಂಜಿನಿಯರ್‌ಗಳ ಕೊಡುಗೆ ಅನನ್ಯವಾಗಿದೆ ಎಂದರು.
ತಂತ್ರಜ್ಞಾನವು ಕೇವಲ ಸ್ಮಾರ್ಟ್ ಆಗಿರದೆ ಸುಸ್ಥಿರವಾಗಿರಬೇಕು. ಯುವಜನರು ಕೇವಲ ಉದ್ಯೋಗ ಅರಸದೆ ಉದ್ಯೋಗ ಸೃಷ್ಟಿಕರ್ತರಾಗಬೇಕು. ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಪರಿಹಾರ ಕಂಡುಕೊಳ್ಳುವತ್ತ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ, ಕಾರ್ಯಕ್ಷಮತೆ ಸದಾ ಆದರ್ಶಪ್ರಾಯ. ತಂತ್ರಜ್ಞಾನವೇ ಇಲ್ಲದ ಆ ಕಾಲದಲ್ಲೇ ಅವರು ನಿರ್ಮಿಸಿದ ಅದ್ಭುತ ಯೋಜನೆಗಳನ್ನು ಇಂದಿಗೂ ಯಾರೂ ಮೀರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಕ್ರಾಂತಿಕಾರಿ ಕಾರ್ಯಗಳು ಸಾಕಾರಗೊಳ್ಳಬೇಕಿದೆ. ಜ್ಞಾನ, ತಂತ್ರಜ್ಞಾನ, ನವೀನತೆಯ ಮೂಲಕ ಜನಸೇವೆ ಮಾಡುತ್ತಾ ಬಲಿಷ್ಠ, ಆಧುನಿಕ ಹಾಗೂ ಸುಸ್ಥಿರ ಕರ್ನಾಟಕವನ್ನು ಕಟ್ಟಬೇಕಿದೆ ಎಂದರು.
ಹಿರಿಯ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಇಂಜಿನಿಯರ್ ಮನೀಶ್ ಪಾಂಡೆ ಅವರಿಗೆ ಯಂಗ್ ಇಂಜಿನಿಯರ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ಅಖಿಲ ಭಾರತ ಇಂಜಿನಿಯರ್ ಸಂಸ್ಥೆಯ ಅಧ್ಯಕ್ಷ ಪಿ.ಸೂರ್ಯ ಪ್ರಕಾಶ್, ಮಾಜಿ ಅಧ್ಯಕ್ಷ ವಿ.ಬಿ.ಸಿಂಗ್, ಪದಾಧಿಕಾರಿಗಳಾದ ಸೀತಾರಾಮ್, ನಾಗರಾಜ್, ಎಚ್. ಎಸ್.ಸುರೇಶ್ ಬಾಬು, ನಂಜಯ್ಯ, ನಿವೃತ್ತ ಮುಖ್ಯ ಇಂಜಿನಿಯರ್ ಮಹದೇವ್ ಇತರರಿದ್ದರು.
*6
ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ 41ನೇ ರಾಷ್ಟ್ರೀಯ ಸಿವಿಲ್ ಇಂಜಿನಿಯರ್‌ಗಳ ಸಮ್ಮೇಳನದಲ್ಲಿ ಹಿರಿಯ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಎನ್. ಚಲುವರಾಯಸ್ವಾಮಿ, ಪಿ.ಸೂರ್ಯ ಪ್ರಕಾಶ್, ವಿ.ಬಿ.ಸಿಂಗ್, ಸೀತಾರಾಮ್, ನಾಗರಾಜ್, ಎಚ್. ಎಸ್.ಸುರೇಶ್ ಬಾಬು ಇತರರಿದ್ದರು.