ಪಾಲಿಕೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಜಾ ಸೇವಾ ವಿಶೇಷ ಇ-ಖಾತಾ ಆಂದೋಲನದಲ್ಲಿ ಇ-ಖಾತಾಗಾಗಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಯಿತು.  Huge crowds at the e-Khata drive
ಮೈಸೂರು

ಇ-ಖಾತಾ ಆಂದೋಲನದಲ್ಲಿ ಜನವೋ ಜನ

ಗುರುವಾರವೂ ಮುಂದುವರಿದ ಅಭಿಯಾನ ಮಹಾನಗರ ಪಾಲಿಕೆಯಿಂದ ಆಯೋಜನೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ ಗುರುವಾರವೂ ಮುಂದುವರಿಯಿತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಆಸ್ತಿಗಳ ದಾಖಲೆ ಡಿಜಿಟಲೀಕರಣ, ಖಾತಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿತ್ತು.

ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಿ ಇ-ಖಾತಾ ಪಡೆಯಲು ಮುಂದಾದರು. ಇದರಿಂದ ಪಾಲಿಕೆ ಮುಖ್ಯ ಕಚೇರಿ ಜನರಿಂದ ತುಂಬಿಹೋಗಿತ್ತು. ಕಾರಿಡಾರ್, ಕಚೇರಿ ಒಳಗೂ ಜನರು ತುಂಬಿದ್ದರು. ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ನಾಗರಿಕರಿಗೆ ಅಗತ್ಯ ಮಾರ್ಗದರ್ಶನ ನೀಡಿ, ದಾಖಲೆ ಪರಿಶೀಲನೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಹಕರಿಸಿದರು.

ಇ-ಖಾತಾ ವ್ಯವಸ್ಥೆಯಿಂದ ಆಸ್ತಿ ಮಾಲೀಕರು, ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದು ತಪ್ಪಲಿದ್ದು, ಆಸ್ತಿ ದಾಖಲೆಗಳ ನಿರ್ವಹಣೆಯಲ್ಲಿ ವೇಗ ಪಾರದರ್ಶಕತೆ ಹೆಚ್ಚಲಿದೆ. ಅಲ್ಲದೆ ಆಸ್ತಿ ವಹಿವಾಟು, ಬ್ಯಾಂಕ್ ಸಾಲ, ಇತರ ಅಧಿಕೃತ ವ್ಯವಹಾರಗಳಿಗೆ ದಾಖಲೆ ಸುಲಭವಾಗಿ ಬಳಸಿಕೊಳ್ಳಲು ಅನುಕೂಲವಾಗಲಿದೆ.

808 ಅರ್ಜಿ ಸ್ವೀಕೃತ:

ಗುರುವಾರ ದಿನವಿಡೀ ನಡೆದ ಆಂದೋಲನದಲ್ಲಿ 808 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ 740 ಅರ್ಜಿಗಳು ಕ್ರಮಬದ್ಧವಾಗಿದ್ದು, ಇ-ಖಾತಾ ವಿತರಣೆಗೆ ಪರಿಗಣಿಸಲಾಗಿದೆ. ಸಮರ್ಪಕ ದಾಖಲೆಗಳೊಂದಿಗೆ ವಲಯ 1ರಲ್ಲಿ 170, ವಲಯ 2ರಲ್ಲಿ 305, ವಲಯ 3ರಲ್ಲಿ 266 ಅರ್ಜಿ ಸಲ್ಲಿಕೆಯಾಗಿವೆ.

ಆಂದೋಲನದ ಮುಂದಿನ ಹಂತದಲ್ಲಿ ನ.6ರಂದು ಪಾಲಿಕೆಯ ವಲಯ 4, 5 ಮತ್ತು 6, ನ.7ರಂದು ವಲಯ 7, 8, 9ರ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆ ಮಾಡಲಾಗುತ್ತದೆ. ಎಲ್ಲ ವಲಯಗಳಲ್ಲಿ ಬೆಳಗ್ಗೆ 10ರಿಂದ ಆಂದೋಲನ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಯೊಂದಿಗೆ ಭಾಗವಹಿಸಿ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಪಾಲಿಕೆ ಕೋರಿದೆ.

ನ.18ರಂದು ಇ-ಖಾತಾ ವಿತರಣೆ

ಆಂದೋಲನದಲ್ಲಿ ಸ್ವೀಕೃತಗೊಂಡು ಪರಿಶೀಲನೆಯ ನಂತರ ಅನುಮೋದನೆ ಪಡೆದ ಅರ್ಹ ಅರ್ಜಿಗಳ ಇ-ಖಾತಾ ನ.18ರಂದು ಬೆಳಗ್ಗೆ 10ರಿಂದ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ವಿತರಿಸಲಾಗುವುದು. ಸಾರ್ವಜನಿಕರಿಗೆ ನಿರಂತರ ಸೇವೆ ಒದಗಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆಯಾ ವಲಯ ಕಚೇರಿಗಳಲ್ಲೂ ಪ್ರತಿ ಶುಕ್ರವಾರ ಇ-ಖಾತಾ ಅಭಿಯಾನ ಮುಂದುವರಿಸಲು ಪಾಲಿಕೆ ನಿರ್ಧರಿಸಿದೆ.

ಆಂದೋಲನದ ಯಶಸ್ಸಿಗೆ ಶ್ರಮಿಸುತ್ತಿರುವ ಕಂದಾಯ ವಿಭಾಗದ ಉಪ ಆಯುಕ್ತರು, ಎಲ್ಲ ವಲಯ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿದಂತೆ ಪಾಲಿಕೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯತತ್ಪರತೆ ಗಮನ ಸೆಳೆಯಿತು.

ನ.6 ಮತ್ತು 7ರಂದು ನಡೆಯಲಿರುವ ಆಂದೋಲನದ ಉಳಿದ ಎರಡು ದಿನಗಳಲ್ಲಿ ವಲಯ 4ರಿಂದ 9ರವರೆಗಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಜನಪರ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಪಾಲಿಕೆಯ ಆಯುಕ್ತೆ ಎಂ.ಕೆ.ಸವಿತಾ ಕೋರಿದ್ದಾರೆ.