ಮೈಸೂರು

ಆಧುನಿಕ ಶಿಕ್ಷಣದೊಂದಿಗೆ ಕೌಶಲವೂ ಅಗತ್ಯ

- ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಮತ - ವಿಶೇಷ ಉಪನ್ಯಾಸ ಮಾಲಿಕೆ

ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದ ಉದ್ದೇಶ ಮತ್ತು ಅದರ ಪರಿಣಾಮಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆಧುನಿಕ ಶಿಕ್ಷಣದೊಂದಿಗೆ ಕೌಶಲ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಬುಧವಾರ ಸಾಹಿತ್ಯ ಅಕಾಡೆಮಿ ಹಾಗೂ ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ಸಹಯೋಗದಲ್ಲಿ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಆಯೋಜಿಸಿದ್ದ ‘ಗತಕಾಲದ ಅಧ್ಯಯನ: ಹಸ್ತಪ್ರತಿ ಸಂಪಾದನೆ ಮತ್ತು ಪಠ್ಯ ವಿಮರ್ಶೆಯ ಮಹತ್ವ’ ಕುರಿತ ವಿಶೇಷ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮನ್ವಯಗೊಳಿಸಿದಾಗ ಮಾತ್ರ ಜ್ಞಾನ ಭಾರತಂ ಅಭಿಯಾನ ದೇಶದ ಅಮೂಲ್ಯ ಸಂಪತ್ತಾಗಿ ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಬುದ್ಧಿಶಕ್ತಿಯೊಂದೇ ಸಾಲದು. ಅದರೊಂದಿಗೆ ಭಾವನಾತ್ಮಕ ಮೌಲ್ಯಗಳು ಮತ್ತು ಸಂಸ್ಕಾರವೂ ಅಗತ್ಯ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಜವಾಬ್ದಾರಿ ಸಮಾಜದ ಮೇಲಿದೆ. ನಮ್ಮ ಪೂರ್ವಜರು, ವಿದ್ವಾಂಸರು ಮತ್ತು ಪಂಡಿತರು ತಾಳೆಗರಿಗಳಲ್ಲಿ ದಾಖಲಿಸಿರುವ ಅಪಾರ ಜ್ಞಾನಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜ್ಞಾನ ಭಾರತಂ ಮಿಷನ್ ಜಾರಿಗೊಳಿಸಿದೆ. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಅಪಾರ ಸಂಖ್ಯೆಯ ಹಸ್ತಪ್ರತಿಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆದರೆ, ಅವುಗಳಲ್ಲಿರುವ ಜ್ಞಾನದ ಸಮರ್ಪಕ ಬಳಕೆ ಇನ್ನೂ ಹೆಚ್ಚಾಗಬೇಕಿದೆ ಎಂದರು.

ಯುನೆಸ್ಕೋ ಪಟ್ಟಿಯಲ್ಲಿ ಅರ್ಥಶಾಸ್ತ್ರದ ಹಸ್ತಪ್ರತಿಗೆ ಸ್ಥಾನ:

ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ಕೊಡುಗೆ ಮಹತ್ವದ್ದಾಗಿದೆ. ಹಸ್ತಪ್ರತಿಗಳನ್ನು ಸಂಗ್ರಹಿಸುವುದಕ್ಕಿಂತ ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಸವಾಲಿನ ಕೆಲಸ. ಅರ್ಥಶಾಸ್ತ್ರದ ಹಸ್ತಪ್ರತಿ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ. ಇಂತಹ ಅಮೂಲ್ಯ ಜ್ಞಾನಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಶೃಂಗೇರಿ ಮಠ, ಇನ್ಫೋಸಿಸ್ ಮತ್ತು ಮಿಥಿಕ್ ಸೊಸೈಟಿಯಂತಹ ಸಂಸ್ಥೆಗಳು ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿವೆ. ಮೈಸೂರು ವಿಶ್ವವಿದ್ಯಾಲಯವೂ ಈ ಕಾರ್ಯಕ್ಕೆ ಸದಾ ಬೆಂಬಲ ನೀಡಲಿದೆ. ಜತೆಗೆ ವೇದ-ವಿಜ್ಞಾನ ಕೇಂದ್ರ ಸ್ಥಾಪನೆಗೂ ಪ್ರಯತ್ನಿಸಲಾಗುವುದು ಎಂದರು.

ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಆರ್.ಪ್ರದೀಪ್ ಕುಮಾರ್ ದೀಕ್ಷಿತ್ ಮಾತನಾಡಿ, ಇತಿಹಾಸದ ಅಧ್ಯಯನದಿಂದ ನಮ್ಮ ಪೂರ್ವಜರ ಜ್ಞಾನ, ಜೀವನಶೈಲಿ ಹಾಗೂ ಚಿಂತನೆಗಳ ಕುರಿತು ಅನೇಕ ಸಂಗತಿಗಳು ತಿಳಿಯುತ್ತವೆ. ಹಿಂದಿನ ಕಾಲದ ಪಂಡಿತರು ಮತ್ತು ವಿದ್ವಾಂಸರು ವಿವಿಧ ವಿಷಯಗಳ ಜ್ಞಾನವನ್ನು ಹಸ್ತಪ್ರತಿಗಳ ಮೂಲಕ ದಾಖಲಿಸಿದ್ದಾರೆ. ಕಾಲಕ್ರಮೇಣ ಕೆಲವು ಹಸ್ತಪ್ರತಿಗಳು ನಾಶವಾಗಿದ್ದರೂ, ಉಳಿದಿರುವುದನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಿ.ಪಿ.ಮಧುಸೂದನಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಅವುಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ವಿವರಿಸಿದರು.

ನಂತರ ಎ.ಪಿ.ಪ್ರತೋಷ್, ಎಸ್.ಸುಘೋಷಾಚಾರ್ಯ, ಕೆ.ಎಲ್.ಶ್ರೀನಿವಾಸ್ ಮತ್ತು ಎಂ.ವಿ.ವರದರಾಜನ್ ಅವರು ಹಸ್ತಪ್ರತಿಗಳು ಹಾಗೂ ತಂತ್ರಜ್ಞಾನದ ನಡುವಿನ ಸಂಬಂಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಷಣ್ಮುಖಾನಂದ, ಪ್ರಾಚ್ಯವಿದ್ಯಾ ಸಂಶೋಧನಾಲಯದ ಮಾಜಿ ನಿರ್ದೇಶಕ ಎಸ್.ಶಿವರಾಜಪ್ಪ, ಉಪನಿರ್ದೇಶಕಿ ಸಿ.ಪಾರ್ವತಿ, ಹಿರಿಯ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು