ಹುಣಸೂರು : ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿ ಅಭಿಯಾನ ಆರಂಭಿಸಲಾಗುವುದು ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.
ದೇಶದಲ್ಲಿ 45 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರ ದುಡಿಮೆಗೆ ಸೂಕ್ತ ಭದ್ರತೆಯಿಲ್ಲ. ಇವರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯವಿಲ್ಲ. ಇವರೆಲ್ಲರೂ ಕೌಶಲಭರಿತ ಪ್ರತಿಭೆಯನ್ನು ಹೊಂದಿದವರಾಗಿದ್ದು, ಅವರಿಗೆ ಕೌಶಲಭರಿತ ಶಿಕ್ಷಣ ಅವಶ್ಯಕತೆ ಇದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಕೌಶಲ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಸಂಘಟಿತ ಕಾರ್ಮಿಕ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಜನಜಾಗೃತಿ ಅಭಿಯಾನ ನಡೆಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನಪ್ಪ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಿವರಾಜು ಕೊಣಸೂರು, ಮೈಸೂರು ನಗರ ಸಂಘಟನಾ ಕಾರ್ಯದರ್ಶಿ ಕುಮಾರಶೆಟ್ಟಿ ಹಾಗೂ ಮುಖಂಡ ಮಹದೇವ್ ಗಾವಡಗೆರೆ ಇದ್ದರು.