ತಿ.ನರಸೀಪುರ: ಕನ್ನಡ ರಾಜ್ಯೋತ್ಸವವನ್ನು ತಾಲೂಕಿನಲ್ಲಿ ಮಾದರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ತಿಳಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮವನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ಆಯೋಜಿಸಿ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಪಾಲಕರು ತಮ್ಮ ಮಕ್ಕಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸಲು ಪ್ರೋತ್ಸಾಹಿಸಬೇಕು. ಕೇವಲ ಹೆಚ್ಚು ಅಂಕ ಗಳಿಸುವ ಉದ್ದೇಶದಿಂದ ಇತರ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ಮರಯ್ಯ ಮಾತನಾಡಿ, ಪೂರ್ವಭಾವಿ ಸಭೆಗಳಿಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುತ್ತಿರುವುದು ಬೇಸರದ ಸಂಗತಿ. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ಹಾಜರಾತಿ ದಾಖಲಿಸುವುದಕ್ಕೆ ಸೀಮಿತವಾಗದೆ, ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಾಜ್ಯೋತ್ಸವ ಸಿದ್ಧತೆಯಲ್ಲಿ ನಿರ್ಲಕ್ಷ್ಯ ತೋರಿದರೆ ಮುಖಂಡರೆಲ್ಲ ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ಅಧಿಕಾರಿ ರಾಜಣ್ಣ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶಾಂತಾ, ಮೀನುಗಾರಿಕೆ ಇಲಾಖೆಯ ಶ್ವೇತಾ, ಸೆಸ್ಕ್ ಎಇಇ ವಿರೇಶ್, ಬನ್ನೂರು ಸೆಸ್ಕ್ ಎಇಇ ಅರ್ಚನ, ಪುಟ್ಟಮಲ್ಲಯ್ಯ, ಸಿ.ಪುಟ್ಟಯ್ಯ, ಡಾ.ಎಂ.ಮಾದೇಶ್, ಪ್ರಸಾದ್ ನಾಯಕ್, ಯೋಗೀಶ್, ಕೃಷ್ಣಮೂರ್ತಿ, ವೆಂಕಟೇಶ್ ವಿನಾಯಕ್, ಮಾದೇಶ್, ಕೆಂಡಗಣ್ಣಸ್ವಾಮಿ, ಮಹೇಶ್, ನಳಿನಿ, ವೆಂಕಟೇಶ್ ಉಪಸ್ಥಿತರಿದ್ದರು.