ಮೈಸೂರು: ನಾಡಹಬ್ಬದ 5ನೇ ದಿನವಾದ ಗುರುವಾರ ದಸರೆಯಲ್ಲಿ ಸಾಂಸ್ಕೃತಿಕ ಸಿರಿವೈಭವ ಮೇಳೈಸಿತು.
ಪುರಭವನದಿಂದ ಬೆಳಗ್ಗೆ ಹೊರಟ ಪಾರಂಪರಿಕ ನಡಿಗೆಗೆ ಕಾರ್ಯಕ್ರಮ ಗಮನ ಸೆಳೆಯಿತು. ನಟ ಬಿ.ಸುರೇಶ್ ಸೇರಿದಂತೆ ಇತರರು ರಾಜಬೀದಿಯಲ್ಲಿ ಹೆಜ್ಜೆ ಹಾಕುವ ಮೂಲಕ ಪಾರಂಪರಿಕ ಕಟ್ಟಡ ಚರಿತ್ರೆ ತಿಳಿದುಕೊಂಡರು. ಮನೆಮನೆಯಲ್ಲಿ ಬೊಂಬೆ ಪ್ರದರ್ಶನ, ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್ ಫೋಟೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
‘ಚಿಗುರು‘ ಕವಿಗೋಷ್ಠಿಯಲ್ಲಿ ಚಿಗುರು ಕವಿಗಳು ಕಾವ್ಯ ವಾಚಿಸಿದರು. ದಾವಣಗೆರೆಯ ಎ.ಟಿ.ಅದ್ವಿಕ ಅವರು ‘ಕಾವ್ಯ ಕನ್ನಡಕ್ಕೆ ನನ್ನ ಜೈಂಕಾರ’ ಕವಿತೆ ವಾಚಿಸಿ ಕನ್ನಡಪ್ರೇಮ ಮೆರೆದರೆ, ಲಾವಣ್ಯ ಅವರು ‘ಮನುಷ್ಯ ಮತ್ತು ಯಂತ್ರ’ ಕವಿತೆ ವಾಚಿಸಿ ಯಂತ್ರವು ಮನುಷ್ಯರ ಉದ್ಯೋಗ ಕಸಿದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಂಜನಗೂಡಿನ ಕೃತಿಕಾ ‘ನಮ್ಮ ಮೈಸೂರು ದಸರಾ’ ಕವಿತೆಯು ನಾಡಹಬ್ಬ ವೈಭವ ವರ್ಣಿಸಿತು. ವಿದೇಶದಲ್ಲಿ ನೆಲೆಸಿರುವ ಕನ್ನಡ ಕವಿಗಳು ವಿಡಿಯೋ ರೇಕಾರ್ಡಿಂಗ್ ಮೂಲಕ ಕವಿತೆ ವಾಚಿಸಿದರು.
ಕಾಮಿಡಿ ಕಿಲಾಡಿಗಳು ಹಾಸ್ಯ ಕಚಗುಳಿ: ಮಹಿಳಾ ದಸರಾದಲ್ಲಿ ವೇಷಭೂಷಣ ಧರಿಸಿ ನಾರಿಯರ ವಾಕಥಾನ್, ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚಂಪಕ ನೃತ್ಯ, ಸಮೂಹ ನೃತ್ಯ, ಕಲಾನೃತ್ಯ ನಡೆಯಿತು. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ ಸಭಿಕರಿಗೆ ಕಚಗುಳಿ ಇಟ್ಟಿತು. ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರೊಂದಿಗೆ ಸಂವಾದ ನಡೆಯಿತು. ಬಳಿಕ ನಡೆದ ಆಟೋಟ, ಹಗ್ಗ ಜಗ್ಗಾಟ ಸ್ಪರ್ಧೆ ನಾರಿಮಣಿಗಳ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಮಕ್ಕಳ ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕಲರವ ಕಳೆಗಟ್ಟಿತ್ತು. ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಪಂಜಕುಸ್ತಿ ಪಂದ್ಯಾವಳಿ ಆಸಕ್ತಿ ಮೂಡಿಸಿತು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳವು ಪುಸ್ತಕಾಸಕ್ತರನ್ನು ಎದುರು ನೋಡುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಜನರೂ ಬರುತ್ತಿಲ್ಲ. ಪುಸ್ತಕ ಮಾರಾಟವೂ ಮಂದಗತಿಯಲ್ಲಿ ಸಾಗಿದೆ. ಇದು ಪ್ರಕಾಶಕರಲ್ಲಿ ಚಿಂತೆ ಮೂಡಿಸಿದೆ.
ಕುಪ್ಪಣ್ಣ ಉದ್ಯಾನದಲ್ಲಿ ನಡೆದಿರುವ ದಸರಾ ಫಲಪುಷ್ಪ ಪ್ರದರ್ಶನ ಹೂವಿನ ಪ್ರೇಮಿಗಳನ್ನು ಕೈಬಿಸಿ ಕರೆಯಿತು. ಹೂವಿನ ವಿಧಾನಸೌಧ ಎಲ್ಲರ ಕೇಂದ್ರ ಬಿಂದು ಎನಿಸಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಆಹಾರ ಮೇಳದಲ್ಲಿ ವಿವಿಧ ಖಾದ್ಯ ಘಮಲು ಬಾಯಿಯಲ್ಲಿ ನೀರು ತರಿಸಿತು. ಆಹಾರಪ್ರಿಯಯರು ಇಲ್ಲಿಗೆ ಲಗ್ಗೆ ಇಟ್ಟು ತಮ್ಮ ನೆಚ್ಚಿನ ಆಹಾರವನ್ನು ಸವಿದು ಖುಷಿಪಟ್ಟರು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಆಹಾರ ಮೇಳ, ಫಲಪುಷ್ಪ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ದಸರೆಯ ಲವಲವಿಕೆಯನ್ನು ವೃದ್ಧಿಸಿದೆ.
ಸೂರ್ಯಾಸ್ತವಾಗುತ್ತಿದ್ದಂತೆ ವಿವಿಧೆಡೆ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ಶಾಸ್ತ್ರೀಯ ನೃತ್ಯ, ಸಂಗೀತ, ನೃತ್ಯರೂಪಕ ಸಂಗೀತದ ಸುಧೆ ಹರಿಯಿತು. ದೀಪಾಲಂಕಾರವು ಮಲ್ಲಿಗೆ ನಗರಿಯ ಅಂದವನ್ನು ಹೆಚ್ಚಿಸಿದೆ.
ಪ್ರಜ್ವಲಿಸುವ ಅರಮನೆ ವೇದಿಕೆಯಲ್ಲಿ ಡಿ.ನಾದ ಕ್ರಿಯೇಷನ್ಸ್, ಸಿದ್ದೇಶ್ವರ ತಂಡದಿಂದ ಜಾನಪದ ಗೀತೆ, ಡಾ.ಶ್ರುತಿ ರಂಜಿನಿ, ಬಿಂದು ಮಾಲಿನಿ ತಂಡದಿಂದ, ಚಿಂತನಪಲ್ಲಿ ವಿ.ಶ್ರೀನಿವಾಸ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಗೊಂಡಿತು.
ಉಪಕಾರ್ ಕಲ್ಚರಲ್ ಅಕಾಡೆಮಿ ಟ್ರಸ್ಟ್ನ ಬೆಂಗಳೂರಿನ ಟಿ.ರಾಜಾರಾಮ್ ತಂಡದಿಂದ ಸುಗಮ ಸಂಗೀತ, ಸ್ಟಕ್ಯಾಟೋ ಫ್ರೆಶ್ಲಿ ಬ್ರೀವ್ಡ್ ಅವರಿಂದ ಇಂಡಿಯನ್ ಕಂಟೆಂಪರರಿ ಪ್ಯೂಷನ್ನಿಂದ ವಿಶಿಷ್ಟ ಸಂಗೀತ ಸುಧೆ, ಕೇರಳ ನೃತ್ಯ ಕಾರ್ಯಕ್ರಮ ರಂಜಿಸಿತು. ಮತ್ತೊಂದೆಡೆ, ಯುವ ದಸರಾದಲ್ಲಿ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಅವರಿಂದ ಸಂಗೀತದ ಕಾರಂಜಿ ಹರಿಯಿತು.
ದಸರಾದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಕರಾವಳಿ ಕ್ರೀಡೆಯಾದ ಕಂಬಳ ಕೋಣಗಳ ಪ್ರಾಯೋಗಿಕ ಓಟ ನಡೆಯಿತು. ಮಂಗಳೂರಿನಿಂದ ಬಂದಿರುವ ಕೋಣಗಳು ಶರವೇಗದಲ್ಲಿ ಓಡಿ ನೋಡುಗರಿಗೆ ರೋಚಕ ಅನುಭವ ನೀಡಿದವು. ಕೋಣಗಳ ಓಟಕ್ಕೆ ಅನುಗುಣವಾಗಿ ಓಟಗಾರರಾದ(ಜಾಕಿ) ಓಡುವ ಮೂಲಕ ಗಮನ ಸೆಳೆದರು. ಪ್ರಾಯೋಗಿಕ ಓಟಕ್ಕಾಗಿ ಕೋಣಗಳು ಆಗಮಿಸಿರುವ ಮಾಹಿತಿ ಪಡೆದ ಸ್ಥಳೀಯರು, ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಯ ಚಟುವಟಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು.