ಲಿಂಗಾಂಬುಧಿ ಸಸ್ಯೋದ್ಯಾನ Lingambudhi Botanical Garden: Remaining Unnamed
ಮೈಸೂರು

ಅನಾಮಿಕವಾಗಿ ಉಳಿದ ಲಿಂಗಾಂಬುಧಿ ಸಸ್ಯೋದ್ಯಾನ

ಮಾಹಿತಿ ಕೊರತೆಯಿಂದ ಪ್ರವಾಸಿಗರು ಬರುತ್ತಿಲ್ಲ ಸರ್ಕಾರಿ ವೆಬ್‌ಸೈಟ್‌ನಲ್ಲೂ ವಿವರಣೆ ಇಲ್ಲ ಪ್ರವಾಸಿ ಮಾರ್ಗಸೂಚಿ ಫಲಕದಲ್ಲೂ ಹೆಸರಿಲ್ಲ

ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟದ ಕುರಿತು ಹೆಚ್ಚಿನ ಪ್ರಚಾರ ಮಾಡಲು ಕ್ರಮ ವಹಿಸಲಾಗಿದೆ. ನಗರದ ಪ್ರಮುಖ ರಸ್ತೆಯಲ್ಲಿ ಮಾರ್ಗಸೂಚಿ ನಾಮಫಲಕ, ಸರ್ಕಾರಿ ಇಲಾಖೆಗಳ ವಿವಿಧ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಸಿ.ನವೀನ್ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸಸ್ಯ ಸೌಂದರ್ಯ ಸಿರಿಯನ್ನು ಮೈದುಂಬಿಕೊಂಡಿರುವ ನಗರದ ‘ಲಿಂಗಾಂಬುಧಿ ಸಸ್ಯೋದ್ಯಾನ’ ಪ್ರವಾಸಿಗರು, ಜನಸಾಮಾನ್ಯರಿಂದ ದೂರವೇ ಉಳಿದಿದ್ದು, ಸಸ್ಯಲೋಕದ ನಿಧಿಯಾಗಿರುವ ಇದು ಪ್ರಚಾರದ ಕೊರತೆಯಿಂದಾಗಿ ಈಗಲೂ ಅಪರಿಚಿತವೇ..!

ಸಸ್ಯೋದ್ಯಾನಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರಿನ ಲಾಲ್‌ಬಾಗ್, ಊಟಿಯಲ್ಲಿ ‘ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನ’ಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ದೌಡಾಯಿಸುತ್ತಿಲ್ಲ. ಜತೆಗೆ, ಈ ಅಪರೂಪದ ಸಸ್ಯೋದ್ಯಾನ ಕುರಿತು ಮೈಸೂರಿನ ಬಹಳಷ್ಟು ಜನರಿಗೂ ತಿಳಿದಿಲ್ಲ. ಅಷ್ಟರಮಟ್ಟಿಗೆ ಇದು ಅನಾಮಿಕವಾಗಿಯೇ ಉಳಿದುಬಿಟ್ಟಿದೆ.

ಲಾಲ್‌ಬಾಗ್ ನಂತರ ರಾಜ್ಯದ 2ನೇ ಸಸ್ಯೋದ್ಯಾನ ಎಂಬ ಹಿರಿಮೆ ಹೊಂದಿರುವ ಇದಕ್ಕೆ ನಿತ್ಯ ಅಂದಾಜು 2 ಸಾವಿರ ಜನರು ಬರುತ್ತಾರೆ. ವಾರಾಂತ್ಯದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆಯಷ್ಟೇ. ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ನಗರದ ಹೃದಯ ಭಾಗದಿಂದ 10 ಕಿ.ಮೀ.ದೂರ ಇರುವ ಇಲ್ಲಿಗೆ ಬರಲು ಮನಸ್ಸನ್ನೂ ಮಾಡುತ್ತಿಲ್ಲ...!

ದಸರಾದಲ್ಲಿ ಬಂದವರು 48 ಸಾವಿರ ಜನ

ದಸರಾ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಗರದ ಕುಪ್ಪಣ್ಣ ಪಾರ್ಕ್, ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಕುಪ್ಪಣ್ಣ ಪಾರ್ಕ್‌ಗೆ ಜನರು ಮುಗಿಬಿದ್ದಿದ್ದರೆ, ಇಲ್ಲಿಗೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಜನರೇ ಇರಲಿಲ್ಲ. 11 ದಿನ ಕಾಲ ನಡೆದ ಫಲಪುಷ್ಪ ಪ್ರದರ್ಶನ ವೀಕ್ಷಣೆಗಾಗಿ ಕುಪ್ಪಣ್ಣ ಪಾರ್ಕ್‌ಗೆ ಬರೋಬ್ಬರಿ 3 ಲಕ್ಷ ಜನರು ಭೇಟಿ ಕೊಟ್ಟರೆ, ಇಲ್ಲಿಯ ಫ್ಲವರ್ ಶೋಗೆ ಬಂದವರು 48 ಸಾವಿರ ಜನರು ಮಾತ್ರ.

ಪ್ರವಾಸಿಗರನ್ನು ಆಕರ್ಷಿಸಲು ವಿಫಲ:

ಈ ತೋಟದಲ್ಲಿ 70 ಸಸ್ಯಶಾಸ್ತ್ರೀಯ ಕುಟುಂಬಗಳಿಗೆ ಸೇರಿದ 180 ಜಾತಿಯ 327ಕ್ಕೂ ಹೆಚ್ಚು ದೇಸಿ, ವಿದೇಶಿ ಸಸ್ಯ ಪ್ರಭೇದಗಳಿವೆ. 25 ಸಾವಿರಕ್ಕೂ ಹೆಚ್ಚು ಗಿಡ, ಮರ, ಬಳ್ಳಿಗಳ ಸಂಗ್ರಹವಿದೆ. ಸಸ್ಯತೋಟಕ್ಕೆ ಹೊಂದಿಕೊಂಡಿರುವ ಲಿಂಗಾಂಬುಧಿ ಕೆರೆ ಪ್ರದೇಶದಲ್ಲಿ ಅಂದಾಜು 194 ಪಕ್ಷಿ ಚಿಲಿಪಿಲಿ ಗೋಚರವಾಗುತ್ತದೆ. ಸಸ್ಯ, ಪಕ್ಷಿ, ಜೀವವೈವಿಧ್ಯದ ಪ್ರಮುಖ ತಾಣವಾಗಿಯೂ ರೂಪುಗೊಂಡಿದೆ. ಆದಾಗ್ಯೂ, ಲಿಂಗಾಂಬುಧಿ ಪುಷ್ಪಮೇಳವು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಆಕರ್ಷಿಸಲು ವಿಫಲವಾಗಿದ್ದು ಸುಳ್ಳಲ್ಲ.

ಕಾಣದ ಪ್ರವಾಸಿಗರ ದಂಡು:

ಪ್ರಚಾರದ ಕೊರತೆಯಿಂದ ಈ ಲಿಂಗಾಂಬುಧಿ ಸಸ್ಯೋದ್ಯಾನ ಈಗಲೂ ಅಪರಿಚಿತ. 2023ರ ಅಕ್ಟೋಬರ್ 25ರಂದು ಇದು ಉದ್ಘಾಟನೆಗೊಂಡಿದೆ. ಇದು ಕಣ್ತೆರೆದು 3 ವರ್ಷವಾದರೂ ಬಹಳಷ್ಟು ಪ್ರವಾಸಿಗರ, ಮೈಸೂರಿನವರ ಕಣ್ಣು ಇದರ ಮೇಲೆ ಬಿದ್ದಿಲ್ಲ.ನಗರದ ವಿವಿಧ ಪ್ರೇಕ್ಷಣಿಯ ತಾಣದಲ್ಲಿ ಗೋಚರವಾಗುವಂತಹ ಪ್ರವಾಸಿಗರ ದಂಡು ಸಹ ಕಾಣಸಿಗುವುದಿಲ್ಲ.

ಸರ್ಕಾರಿ ವೆಬ್‌ಸೈಟ್‌ನಲ್ಲೂ ಮಾಹಿತಿ ಇಲ್ಲ:

ಈ ಸಸ್ಯೋದ್ಯಾನದ ಕುರಿತು ಸಣ್ಣ ಮಾಹಿತಿ ಎಲ್ಲಿಯೂ ಸಿಗಲ್ಲ. ಜಿಲ್ಲಾಡಳಿತ, ಮೃಗಾಲಯ, ಮೈಸೂರು ಅರಮನೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಇದರ ಹೆಸರನ್ನು ಹುಡುಕಿದರೂ ಸಿಗಲ್ಲ.

ನಗರದ ಪ್ರಮುಖ ಪ್ರವಾಸಿ ತಾಣಗಳ ಕುರಿತು ಬಹುತೇಕ ವೆಬ್‌ಸೈಟ್‌ನಲ್ಲಿ ಪುಟಗಟ್ಟಲೇ ವಿವರಣೆ ದೊರೆಯುತ್ತದೆ. ಆದರೆ, ಇದರ ಕುರಿತು ಸಣ್ಣ ಮಾಹಿತಿ, ಫೋಟೋಗಳೂ ಕಾಣಸಿಗಲ್ಲ. ಇದರ ಮಾಲೀಕರಾಗಿರುವ ತೋಟಗಾರಿಕೆ ಇಲಾಖೆಯ ವೆಬ್‌ಸೈಟ್, ಅದರ ಪ್ರಚಾರ ಸಾಮಗ್ರಿಯಲ್ಲೂ ಇದು ಸ್ಥಾನ ಪಡೆದಿಲ್ಲ. ಅಷ್ಟರಮಟ್ಟಿಗೆ ಇಡೀ ಆಡಳಿತ ವ್ಯವಸ್ಥೆಯೇ ಇದನ್ನು ನಿರ್ಲಕ್ಷೃ ಮಾಡಿದೆ ಎಂಬುದಕ್ಕೆ ಇದುವೇ ಸಾಕ್ಷಿ.

ಮಾರ್ಗಸೂಚಿ ನಾಮಫಲಕದಲ್ಲೂ ಹೆಸರಿಲ್ಲ:

ನಗರದ ವಿವಿಧೆಡೆ ಅಳವಡಿಸಿರುವ ಪ್ರವಾಸಿ ಮಾರ್ಗಸೂಚಿ ನಾಮಫಲಕಗಳಲ್ಲೂ ಇದರ ಹೆಸರಿಲ್ಲ. ಮೃಗಾಲಯ, ಅರಮನೆ, ಚಾಮುಂಡಿಬೆಟ್ಟಕ್ಕೆ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದು ಪ್ರವಾಸಿಗರಿಗೆ ನಾಮಫಲಕ ಮೂಲಕ ದಾರಿ ತೋರಿಸಲಾಗುತ್ತದೆ. ಆದರೆ, ಇದರ ಕುರಿತು ನಗರದಲ್ಲಿ ಎಲ್ಲೇ ಹುಡುಕಿದರೂ ಒಂದೇ ಒಂದು ಮಾರ್ಗಸೂಚಿ ನಾಮಫಲಕ ಗೋಚರವಾಗಲ್ಲ. ರಾಮಕೃಷ್ಣನಗರದ ಮೂಲೆಯಲ್ಲಿರುವ ಈ ಸಸ್ಯ ತೋಟಕ್ಕೆ ಹೇಗೆ ಹೋಗಬೇಕು ಎಂಬುದು ಪ್ರವಾಸಿಗರಿಗೂ ಗೊತ್ತಾಗುತ್ತಿಲ್ಲ.

ಇಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಈ ಉದ್ಯಾನದ ಎದುರಿನ ಕಚ್ಚಾರಸ್ತೆ ಡಾಂಬರ್ ಕಂಡಿಲ್ಲ. ಮಳೆ ಬಂದರೆ ಇದು ಕೆಸರುಮಯವಾಗುತ್ತದೆ. ನಡೆದಾಡಲು ಕಷ್ಟಕರ. ಹೀಗೆ ಇಂತಹ ಸಮಸ್ಯೆಗಳನ್ನು ಬಗೆಹರಿಸಿದರೆ ಲಿಂಗಾಂಬುಧಿ ಸಸ್ಯೋದ್ಯಾನ ನೈಸರ್ಗಿಕ ಸಿರಿಯನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬೀಳುವುದು ಖಚಿತ.

ವರ್ಷವಿಡೀ ಪುಷ್ಪಮೇಳ:

ಕುಪ್ಪಣ್ಣ ಪಾರ್ಕ್‌ನಲ್ಲಿನ ಫಲಪುಷ್ಪ ಪ್ರದರ್ಶನ ದಸರಾಕ್ಕೆ ಮಾತ್ರ ಸೀಮಿತ. ಇಲ್ಲಿ ವರ್ಷವಿಡೀ ಪುಷ್ಪಮೇಳ ಮೇಳೈಸಿರುತ್ತದೆ. ಹೆಜ್ಜೆ, ಹೆಜ್ಜೆಗೂ ಸಸ್ಯಗಳು, ವೈವಿಧ್ಯಮಯ ಗುಲಾಬಿ ಹೂವುಗಳು, ಔಷಧೀಯ ಸಸ್ಯಗಳು, ಹಣ್ಣಿನಮರಗಳು, ಹೂಗಳು ಇಲ್ಲಿನ ಒಡಲಿನಲ್ಲಿ ಮೈದುಂಬಿವೆ. ಚಿಣ್ಣರು, ಹಿರಿಯರಿಗೆ ಚೇತೋಹಾರಿ ಅನುಭವ ನೀಡುವ ಹೂಗಳ ಲೋಕ, ಚಿಟ್ಟೆಗಳ ಪ್ರಪಂಚ, ‘ಟೊಪಿಯರಿ’ ಆಕೃತಿಗಳು ಕಣ್ಮನ ಸೆಳೆಯುತ್ತವೆ. ಅಳಿವಿನಂಚಿನ 350ಕ್ಕೂ ಹೆಚ್ಚು ಸಸ್ಯ ಪ್ರಭೇದ ವೀಕ್ಷಣೆಗೆ ಲಭ್ಯವಿರುವುದು ವಿಶೇಷ.

ಆಹ್ಲಾದಕರ ಅನುಭವ:

ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿ ಸ್ಮರಣಾರ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ 1828ರಲ್ಲಿ 250 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಕೆರೆಯನ್ನು ಕಟ್ಟಿಸಿದರು. 150 ಎಕರೆಯಲ್ಲಿ ಜಲರಾಶಿಯಿದ್ದರೆ, 100 ಎಕರೆಯಲ್ಲಿ ಮೀಸಲು ಅರಣ್ಯ ಹಬ್ಬಿದೆ. 15 ಎಕರೆಯಲ್ಲಿರುವ ಸಸ್ಯೋದ್ಯಾನ ಆಹ್ಲಾದಕರ ಅನುಭವ ಉಣಬಡಿಸುತ್ತದೆ. ಸಸ್ಯಗಳ ಸಂರಕ್ಷಣೆ, ಪರಿಚಯ ಮಾಡಿಕೊಡುವುದಲ್ಲದೆ ಪರಿಸರ ಸಂರಕ್ಷಣೆಯ ಪಾಠವನ್ನೂ ಹೇಳುತ್ತದೆ. ಉದ್ಯಾನವು ದೇಸಿ, ವಿದೇಶಿಯ ಸಸ್ಯಗಳ ಸಮ್ಮಿಲನ. ನಗರ, ಹಳ್ಳಿಗಾಡಿನಲ್ಲೂ ಅಪರೂಪವಾಗುತ್ತಿರುವ ಬಾಗೆ, ಅಂಕೋಲೆ, ಸೀಗೆ, ಅಂಟುವಾಳ ಮರಗಳೂ ಇಲ್ಲಿವೆ. ಸುವಾಸನೆ ಭರಿತ ಹೂ ಗಿಡಗಳು, ಬಿದಿರು, ಕಲ್ಲುಗಳ ಉದ್ಯಾನ, ಸಣ್ಣ ಹಣ್ಣುಗಳ ತೋಪು, ಜಲಸಸ್ಯಗಳ ಎರಡು ಕೊಳಗಳೂ ಇವೆ.

ಅಳಿವಿನಂಚಿಗೆ ಬಂದಿರುವ ಹತ್ತಾರು ಜಾತಿಯ ಗಿಡ-ಮರಗಳಿವೆ. ಹಣ್ಣು ನೀಡುವ ಮರಗಳಿವೆ. ಬೂದು ಮಂಗಟ್ಟೆ ಸೇರಿದಂತೆ ನೂರಾರು ಪಕ್ಷಿಗಳು ಹಣ್ಣನ್ನು ಅರಸಿ ಬರುತ್ತವೆ. ಚಿಟ್ಟೆಗಳನ್ನು ಆಕರ್ಷಿಸುವ ಹೂ ಸಸ್ಯ ಸಿರಿ ಇದೆ. ವೀಕ್ಷಣಾ ಗೋಪುರದ ಮೂಲಕ ಪಕ್ಷಿಗಳು, ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇದೀಗ ಸಂಗೀತ ಕಾರಂಜಿ ಶೀಘ್ರದಲ್ಲೇ ಶುರುವಾಗಲಿದೆ. ಹೀಗಾಗಿ, ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಿ.