ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ  Resolve to eradicate drought during the session: Farmers' Association President Badagalapura Nagendra insists.
ಮೈಸೂರು

ಅಧಿವೇಶನದಲ್ಲಿ ಬರ ನಿರ್ಮೂಲನೆಗೆ ಸಂಕಲ್ಪ ಮಾಡಲಿ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪಟ್ಟು

ಸೆ.28ರಿಂದ ಎಲ್ಲ ಜನಪ್ರತಿನಿಧಿಗಳು ರಸ್ತೆಗೆ ಬಂದಾಗ ಪ್ರತಿಭಟನೆ ಹಾಗೂ ಪೊರಕೆ ಚಳವಳಿ

ಮಂಜುನಾಥ ತಿಮ್ಮಯ್ಯ

ಮೈಸೂರು: ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಬರ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿನ ಭೀಕರ ಬರ ಕುರಿತು ಸೆ.21ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ. ಆದರೆ, ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ವಿಷಯಕ್ಕೆ ಸ್ಪಂದಿಸಿ, ರೈತರಿಗೆ ಪರಿಹಾರ ಒದಗಿಸಬೇಕು.

ಈ ನಿಟ್ಟಿನಲ್ಲಿ ಸಹಕರಿಸಿ, ಪರಿಹಾರ ಕಾರ್ಯಗಳು ಕಾರ್ಯರೂಪಕ್ಕೆ ಬರಲು ಅನುವು ಮಾಡಿಕೊಳ್ಳಬೇಕು. ಇಲ್ಲವಾದರೆ, ಸೆ.28ರಿಂದ ಎಲ್ಲ ಜನಪ್ರತಿನಿಧಿಗಳು ರಸ್ತೆಗೆ ಬಂದಾಗ ಪ್ರತಿಭಟನೆ ಹಾಗೂ ಪೊರಕೆ ಚಳವಳಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರವೇ ಹೇಳುವಂತೆ ಸುಮಾರು 140 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರ ಕಾಣಿಸಿಕೊಂಡಿದೆ. ಈ ಕುರಿತು ಅಧಿಕಾರಿಗಳು, ಅಧ್ಯಯನ ಮಾಡಿದ ಸಚಿವರು ವರದಿ ನೀಡಿದ್ದನ್ನು ಬಿಟ್ಟರೆ ಬೇರೇನನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.

ಪ್ರತಿಪಕ್ಷದವರು ಸಹ ಪರಿಶೀಲನೆ ನಡೆಸಿದ್ದರಾದರೂ ವರದಿ ಸಲ್ಲಿಸಿ ರಾಜ್ಯ ಸರ್ಕಾರದ ಮೇಲೆ ಪರಿಹಾರ ಕಾರ್ಯಗಳಿಗೆ ಒತ್ತಡ ಹೇರುವುದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ಮನ್ನಾ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಶೇ.50ರ ಅನುಪಾತದಲ್ಲಿ ಸಾಲ ಮನ್ನಾ ಮಾಡಬೇಕು. ಹಳೆ ಕಾಲದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾನದಂಡದ ಬಿಟ್ಟು ತಮ್ಮ ಸಂಪನ್ಮೂಲದಿಂದಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು.

ಬ್ಯಾಂಕ್‌ಗಳು ಸಾಲ ವಸೂಲಿ ಮಾಡುವುದಕ್ಕೆ ತಡೆಯೊಡ್ಡಬೇಕು, ಕರೆಕಟ್ಟೆ ತುಂಬಿಸಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು, ವಿಮಾ ಕಂಪನಿಗಳು ಸಂಪೂರ್ಣ ಬೆಳೆ ನಷ್ಟದ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕು, ಇದಕ್ಕೆ ವಿಶೇಷ ಅಧಿವೇಶನ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ಒಪ್ಪಿಕೊಳ್ಳದ, ಪೂರ್ಣ ಜಾರಿಯನ್ನೂ ಮಾಡದೆ ಮಾರ್ಪಾಡು ಮಾಡಿಕೊಂಡಿರುವ ಕೇರಳದ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸುವ ಮೂಲಕ ಕಾಡಂಚಿನ ಪ್ರದೇಶಗಳ ರೈತರು, ಬುಡಕಟ್ಟು ವಾಸಿಗಳ ನೆರವಿಗೆ ರಾಜ್ಯ ಸರ್ಕಾರ ಬರಬೇಕೆಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಹೊಸಕೋಟೆ ಬಸರವಾಜು, ನೇತ್ರಾವತಿ, ಹೊಸೂರು ಕುಮಾರ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ಇದ್ದರು.