ಹುಣಸೂರು ನಗರಸಭೆ ಕಚೇರಿ 
ಮೈಸೂರು

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮಾಹಿತಿ ಆಯೋಗ ಆದೇಶ

ಹುಣಸೂರು ನಗರಸಭೆ ಅಧಿಕಾರಿಗಳಿಂದ ಆದಾಯ ನಷ್ಟ

ಹುಣಸೂರು : ಹುಣಸೂರು ನಗರಸಭೆ 4 ವರ್ಷಗಳಿಂದ ನಗರದ ಹಳೇ ಬಿ.ಎಂ.ರಸ್ತೆ(ಸೇತುವೆ) ಮುಖ್ಯರಸ್ತೆಯಲ್ಲಿರುವ ನಗರಸಭೆ ಚಿತ್ರಮಂದಿರ ಕಟ್ಟಡದ ಕೋಟ್ಯಂತರ ರೂ. ಬಾಡಿಗೆ ವಸೂಲಿ ಮಾಡದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದು, ಈ ಕುರಿತು ಸೂಕ್ತ ತನಿಖೆ ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಮಾಹಿತಿ ಹಕ್ಕು ಆಯೋಗ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಹುಣಸೂರು ನಗರಸಭೆ ಆಸ್ತಿಯಾಗಿರುವ ಸೇತುವೆಯ ಚಿತ್ರಮಂದಿರ ಕಟ್ಟಡವನ್ನು 2015ರಲ್ಲಿ ಬಾಣಸಂದ್ರ ಹನೀಫ್ ಭಾಷಾ ಎನ್ನುವವರು ಬಾಡಿಗೆ ಪಡೆದಿದ್ದರು. ಬಾಡಿಗೆಯನ್ನು ಸಕಾಲಕ್ಕೆ ಪಾವತಿಸದೆ ಬಾಡಿಗೆ ಮೊತ್ತ 1 ಕೋಟಿ 52 ಲಕ್ಷ 68 ಸಾವಿರದ 280 ರೂ. ಆಗಿತ್ತು. 2024ರ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯದ ಕುರಿತು ಚರ್ಚಿಸಿ ಚಿತ್ರಮಂದಿರವನ್ನು ಸುಪರ್ದಿಗೆ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ ಬಾಡಿಗೆ ವಸೂಲಾತಿ ಕುರಿತು ಯಾವುದೇ ತೀರ್ಮಾನ ಕೈಗೊಂಡಿರುವುದಿಲ್ಲ ಎಂದು ಮಾಹಿತಿ ಹಕ್ಕು ಆಯೋಗಕ್ಕೆ 2026ರಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಅಧಿಕಾರಿಗಳಿಗೆ ಆದೇಶ ನೀಡಿದ ಆಯೋಗ:

ಪ್ರಕರಣ ಸಂಬಂಧ ನಡೆದ ವಿಚಾರಣೆ ನಂತರ ಬಾಡಿಗೆ ವಸೂಲಾತಿಯಲ್ಲಿನ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಮತ್ತು ವಸೂಲಾತಿ ಮಾಡದಿರುವ ಕುರಿತು ಸೂಕ್ತ ತನಿಖೆ ನಡೆಸಿ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರದ ಪೌರಾಡಳಿತ ನಿರ್ದೇಶಕ ಪಿ.ಎಸ್.ರವೀಂದ್ರ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾರಿಗೆ ಆಯೋಗ ಆದೇಶಿಸಿದೆ ಎಂದು ಜಿಲ್ಲಾ ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ವೇದಿಕೆ(ರಿ) ಜಿಲ್ಲಾಧ್ಯಕ್ಷ ಇಂಟೆಕ್ ರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.