ಮೈಸೂರು; ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ವೈಭವವಾಗಿ ನಡೆಯಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ರಾಮನಗರ ಭಾಗದಿಂದ ಸಾರಿಗೆ ಬಸ್ನಲ್ಲಿ ಆಗಮಿಸಿದ್ದ ಅಂದಾಜು 50 ಸಾವಿರ ಜನರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ನಿಗದಿಯಾಗಿತ್ತು. ಆದರೆ, ಸಿಎಂ ಆಗಮನ ವಿಳಂಬವಾಗಿದ್ದರಿಂದ ಮಧ್ಯಾಹ್ನ 1.54ರ ಹೊತ್ತಿಗೆ ಸಮಾರಂಭ ಉದ್ಘಾಟನೆಗೊಂಡಿತು.
ಅಷ್ಟರಲ್ಲಾಗಲೇ ಊಟದ ಸಮಯವಾಗಿದ್ದರಿಂದ ಜನರು ನಿಧಾನವಾಗಿ ನಿರ್ಗಮಿಸಲು ಶುರು ಮಾಡಿದರು. ಜನರನ್ನು ಕಾರ್ಯಕ್ರಮದಲ್ಲೇ ಉಳಿಸಿಕೊಳ್ಳಲು ಸಚಿವ ಯತೀಂದ್ರ ಅವರು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಹಸಿವು ಮತ್ತು ಕಾರ್ಯಕ್ರಮದ ವಿಳಂಬದಿಂದ ಬೇಸರಗೊಂಡಿದ್ದ ಜನರು ಕಾರ್ಯಕ್ರಮದಿಂದ ನಿರ್ಗಮಿಸಿದರು.
ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಜನರಿಲ್ಲದ ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನೆರೆಯ ಜಿಲ್ಲೆಗಳಿಂದ ಜನರನ್ನು ಕರೆತರಲು ಸಾರಿಗೆ ಬಸ್ ಮತ್ತು ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅವುಗಳ ನಿಲುಗಡೆಗೆ ನಗರದ ಜೆ.ಕೆ.ಮೈದಾನ, ಓವೆಲ್ ಮೈದಾನ, ವಿಲೇಜ್ ಹಾಸ್ಟೆಲ್ ಮೈದಾನ, ಕುಕ್ಕರಹಳ್ಳಿ ಕೆರೆ ಬಳಿಯ ಪಾಲಿಕೆ ಮೈದಾನಲ್ಲಿ ಅವಕಾಶ ನೀಡಲಾಗಿತ್ತು.
ಹೊರ ಜಿಲ್ಲೆಗಳಿಂದ ಬಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಯಂ ಸೇವಕರಿಗಾಗಿ ಆಹಾರ ಕೌಂಟರ್ಗಳನ್ನು ತೆರೆದು, ಕುಡಿಯುವ ನೀರು, ಮಜ್ಜಿಗೆ, ಮಧ್ಯಾಹ್ನದ ಊಟವನ್ನೂ ವಿತರಿಸಲಾಯಿತು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದ ಮೇಲೆ ಒತ್ತಡ ಉಂಟಾಯಿತು. ಹೊರ ಜಿಲ್ಲೆಗಳಿಂದ ಆಗಮಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪ್ರಮುಖ ವೃತ್ತಗಳು, ಕಾರ್ಯಕ್ರಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಿ ವಾಹನ ಸವಾರರು ಪರದಾಡಿದರು.