ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಡಿಜಿಟಲ್ ಗ್ರಂಥಾಲಯದ ಕಾಮಗಾರಿಯನ್ನು ಗುರುವಾರ ಶಾಸಕ ಜಿ.ಡಿ.ಹರೀಶ್‌ಗೌಡ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಪ್ರತಿಮೆ ಮತ್ತು ಗ್ರಂಥಾಲಯ ಕಾಮಗಾರಿ ಮುಂದಿನ ವರ್ಷ ಏ.14ರ ಅಂಬೇಡ್ಕರ್ ಜಯಂತಿಯಂದು ಉದ್ಘಾಟನೆಗೊಳ್ಳಲು ಕ್ರಮವಹಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಅಂಬೇಡ್ಕರ್‌ರ ಶಕ್ತಿ, ಗುರುತು ಎಂದರೆ ಅದು ಅವರ ಜ್ಞಾನ. ಹಾಗಾಗಿಯೇ ಎಲ್ಲರ ಸಹಮತದಿಂದ ಗ್ರಂಥಾಲಯ ನಿರ್ಮಾಣಗೊಳ್ಳುತ್ತಿದೆ. ಗ್ರಂಥಾಲಯ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ 70 ಲಕ್ಷ ರೂ.ಗಳ ಅವಶ್ಯಕತೆಯಿದ್ದು, ಈಗಾಗಲೇ 40 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಪ್ರತಿಮೆ ನಿರ್ಮಾಣಕ್ಕೆ ವೈಯಕ್ತಿಕವಾಗಿ 24 ಲಕ್ಷ ರೂ.ನೀಡಿದ್ದೇನೆ. ಈ ಸ್ಥಳ ಎಲ್ಲರ ಗಮನಸೆಳೆಯುವ ಕೇಂದ್ರವಾಗುವ ಮೂಲಕ ಯುವಜನರಲ್ಲಿ ಪ್ರೇರಣೆ ನೀಡುವ ತಾಣವಾಗಿ ಮಾರ್ಪಾಡಾಗಬೇಕು ಎಂದು ಆಶಿಸಿದರು.
ಈ ವೇಳೆ ಮುಖಂಡರಾದ ನಾಗರಾಜ ಮಲ್ಲಾಡಿ, ಪುಟ್ಟರಾಜು, ನಿಂಗರಾಜ್ ಮಲ್ಲಾಡಿ, ಅಶೋಕ್, ಕಟ್ಟೆಮಳಲವಾಡಿ ದೇವರಾಜ್, ಸಂತೋಷ್‌ಕುಮಾರ್ ಇತರರು ಇದ್ದರು.