ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದೃಷ್ಟಿಚೇತನ ಕಾವ್ಯಯಾನ-13, ರಾಜ್ಯ ಮಟ್ಟದ ಅಂಧರ ವಿಶೇಷ ಕವಿಗೋಷ್ಠಿಯನ್ನು ಪ್ರೊ. ನಂಜಯ್ಯ ಹೊಂಗನೂರು ಉದ್ಘಾಟಿಸಿದರು. ಪ್ರೊ.ನೀಲಗಿರಿ ತಳವಾರ್, ಮುಳ್ಳೂರು ಶಿವಪ್ರಸಾದ್, ಸಿ.ಕೆ.ರವಿ, ಕೇಶವಮೂರ್ತಿ ಇದ್ದರು.  Encouragement Needed for Literary Endeavors by the Visually Impaired: Prof. Nanjayya Honganuru’s Views
ಮೈಸೂರು

ಅಂಧರ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ಅಗತ್ಯ: ಪ್ರೊ. ನಂಜಯ್ಯ ಹೊಂಗನೂರು ಅನಿಸಿಕೆ

ದೃಷ್ಟಿಚೇತನ ಕಾವ್ಯಯಾನ-13 ರಾಜ್ಯ ಮಟ್ಟದ ಅಂಧರ ವಿಶೇಷ ಕವಿಗೋಷ್ಠಿ

ಮೈಸೂರು: ಅಂಧರ ಕವಿತೆಗಳು ಅವರ ಒಳಗಣ್ಣಿನ ಅಭಿವ್ಯಕ್ತಿ ಮತ್ತು ಕ್ರಿಯಾಶೀಲತೆಯ ದ್ಯೋತಕ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು ಬಣ್ಣಿಸಿದರು.

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ವತಿಯಿಂದ ತಿಲಕ್‌ನಗರದ ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ದೃಷ್ಟಿಚೇತನ ಕಾವ್ಯಯಾನ-13, ರಾಜ್ಯ ಮಟ್ಟದ ಅಂಧರ ವಿಶೇಷ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಅಂಧರ ಕವಿತೆಗಳೆಂದು ಉಪೇಕ್ಷ ಮಾಡದೆ ಹೊರಗಿನ ಪ್ರಪಂಚವನ್ನು ಒಳಗಿನಿಂದ ನೋಡುವ ಅವರ ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕು. ದೃಷ್ಟಿದೋಷವುಳ್ಳವರು ಕೌಟುಂಬಿಕ, ಸಾಮಾಜಿಕ, ವೈಯಕ್ತಿಕ ಸವಾಲುಗಳು ಕವಿತೆಗಳಲ್ಲಿ ವ್ಯಕ್ತವಾಗಿ ಸಮಾಜಕ್ಕೆ ಮುಖಾಮುಖಿಯಾಗುತ್ತವೆ ಎಂದರು.

ಸರ್ಕಾರವು ಅಂಧರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸಬೇಕು. ಅಂಧರ ಸಾಹಿತ್ಯ ಸಮ್ಮೇಳನಗಳಲ್ಲಿ ಬಿಡಿಬಿಡಿಯಾಗಿ ಪ್ರಕಟವಾಗಿರುವ ಕವನ ಸಂಕಲನಗಳನ್ನು ಕ್ರೋಡೀಕರಿಸಿ ಸಂಪುಟ ತರಬೇಕು. ಪ್ರಶಸ್ತಿ, ಧನ ಸಹಾಯ ಕೊಟ್ಟು ಉತ್ತೇಜಿಸಬೇಕು ಎಂದು ಹೇಳಿದರು.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 125 ವರ್ಷಗಳ ಹಿಂದೆಯೇ ಅಂಧರ ಶಾಲೆ ತೆರೆದಿರುವುದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ನುಡಿದರು.

ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಕೃಷ್ಣ ಹೊಂಬಾಳ್ ಮಾತನಾಡಿ, ಕಾವ್ಯ ಒಳಗಣ್ಣು. ಅಂಗವಿಕಲರು, ದೃಷ್ಟಿ ದೋಷವುಳ್ಳವರಲ್ಲೂ ಕಾವ್ಯ ಪ್ರತಿಭೆ ಇದೆ. ಅವರ ಸೃಜನಶೀಲತೆ ಸಮಾಜಕ್ಕೆ ಪ್ರಸಾದ. ಕಾವ್ಯದಲ್ಲಿ ಪ್ರೀತಿ ಮತ್ತು ಸಾರ್ಥಕತೆ ಇದೆ ಎಂದರು.

ವಿಕಲತೆ ಸಕಲತೆಯನ್ನು ಮೀರಿದಾಗ ವ್ಯಕ್ತಿತ್ವ ಬೆಳೆಯುತ್ತದೆ. ಅಬಲರಿಗೆ ಸಮಾಜದ ಸಹಕಾರ ಸಿಗಬೇಕು. ಸಹಕಾರ ಸಿಗಲಿಲ್ಲವೆಂದು ಹಿಂಜಯರಿದೇ ಧೈರ್ಯದಿಂದ ಹೆಜ್ಜೆ ಇಡಬೇಕು. ಸಂವೇದನಶೀಲರಾಗಬೇಕು. ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಬೇಕು ಎಂದು ನುಡಿದರು.

ಪತ್ರಕರ್ತ ಮುಳ್ಳೂರು ಶಿವಪ್ರಸಾದ್ ಮಾತನಾಡಿ, ದೃಷ್ಟಿಚೇತನರನ್ನು ಮನೋನೇತ್ರರು ಎಂದು ಕರೆಯಬಹುದು. ಏಕೆಂದರೆ ಮನಸ್ಸಿನಿಂದ ಒಳಗಣ್ಣಿನಿಂದ ಅವರ ನೋಟ ಇರುತ್ತದೆ. ಕುರುಡು ಎಂದರೆ ಕತ್ತಲೆ. ಮನೋ ನೇತ್ರರು ಎಂದರೆ ಮನಸ್ಸಿನಿಂದ ಬೆಳಗುವವರು ಎಂದು ಹೇಳಿದರು.

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮುದಿಗೆರೆ ರಮೇಶ್‌ಕುಮಾರ್ ಮಾತನಾಡಿ, 3 ವರ್ಷಗಳ ಹಿಂದೆ ಆರಂಭವಾದ ಅಂಧರ ಸಾಹಿತ್ಯ ಪರಿಷತ್ತು ಅಂಧರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುತ್ತಿದೆ. ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ ಹಮ್ಮಿಕೊಂಡಿದೆ. ಹೊಸ ಕವಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. 3ನೇ ಅಂಧರ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯ ಅಧೀಕ್ಷಕ ಸಿ.ಕೆ.ರವಿ ಹನಿಗವಿತೆ ಓದಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 22 ಕವಿಗಳು ಕವಿತೆ ವಾಚಿಸಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ನೀಲಗಿರಿ ತಳವಾರ್, ಸಮಿತಿಯ ಸಂಘಟನ ಕಾರ್ಯದರ್ಶಿ ಕೇಶವಮೂರ್ತಿ, ಮುಖ್ಯ ಶಿಕ್ಷಕ ಅರುಣ್‌ಕುಮಾರ್ ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.