ಮೈಸೂರು: ಅಂಗವಿಕಲರನ್ನು ಕೇವಲ ಅನುಕಂಪದ ದೃಷ್ಟಿಯಿಂದ ನೋಡದೆ, ಅವರಲ್ಲಿರುವ ಆಂತರಿಕ ಪ್ರತಿಭೆ, ಸಾಮರ್ಥ್ಯ, ಕೌಶಲ ಗುರುತಿಸಿ, ಸೂಕ್ತ ತರಬೇತಿ, ಅವಕಾಶ ಕಲ್ಪಿಸಬೇಕು. ಇದರೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ಹೇಳಿದರು
ಸಮರ್ಥನಂ ಟ್ರಸ್ಟ್ ವತಿಯಿಂದ ಮೈವಿವಿ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ವಿಶೇಷ ವಿದ್ಯಾರ್ಥಿಗಳಿಗೆ ಸ್ವಾಗತ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪವು ಜಗತ್ತಿಗೆ ಕಾಯಕ, ದಾಸೋಹದ ಮಹತ್ವವನ್ನು ಸಾರಿತು. ಪ್ರತಿಯೊಬ್ಬರಿಗೂ ಕಾಯಕದ ಮೂಲಕ ಗೌರವಯುತ ಬದುಕು ರೂಪಿಸಿಕೊಳ್ಳುವ ಅವಕಾಶ ಇರಬೇಕು ಎಂಬುದು ಶರಣರ ಆಶಯವಾಗಿತ್ತು. ಶರಣರ ಸಮಾನತೆ, ಕಾಯಕ, ದಾಸೋಹದ ತತ್ವ ಇಂದಿನ ಸಂವಿಧಾನದ ಆಶಯಗಳಿಗೂ ಪೂರಕವಾಗಿವೆ. ವಿಶೇಷ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ಎಂಬ ದಾಸೋಹದ ಪರಿಕಲ್ಪನೆಯ ಮೂಲಕ ಆತ್ಮಸ್ಥೈರ್ಯ ತುಂಬುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಕುರಿತು ಮಾತನಾಡಿದ ಜೆಎಸ್ಎಸ್ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ, ಸಹ ಪ್ರಾಧ್ಯಾಪಕ ಡಾ.ಬಿ.ಪ್ರಭುಸ್ವಾಮಿ, ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಜಾತಿ-ಧರ್ಮದ ತಾರತಮ್ಯ, ಮೇಲು-ಕೀಳು ಭಾವನೆ, ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು ಎಂದರು.
ಬಸವಣ್ಣನವರ ದೃಷ್ಟಿಯಲ್ಲಿ ಕಾಯಕವೇ ಕೈಲಾಸವಾಗಿದ್ದು, ಯಾವುದೇ ಕೆಲಸವು ಕೀಳಲ್ಲ, ಪ್ರತಿಯೊಬ್ಬರೂ ಗೌರವಯುತವಾಗಿ ದುಡಿದು ಬದುಕಬೇಕು ಎಂಬುದು ಅವರ ಮಹತ್ವದ ಸಂದೇಶವಾಗಿತ್ತು. ದುಡಿಮೆಯಿಂದ ಗಳಿಸಿದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವ ದಾಸೋಹ ತತ್ವವು ಮಾನವೀಯತೆ, ಸಹಬಾಳ್ವೆ, ಸಾಮಾಜಿಕ ಜವಾಬ್ದಾರಿ ಸಾರುತ್ತದೆ ಎಂದರು.
ಅನುಭವ ಮಂಟಪದ ಮೂಲಕ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸಿ, ಮಹಿಳೆಯರು, ಶೋಷಿತ ಸಮುದಾಯಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಗೌರವಯುತ ಸ್ಥಾನಮಾನ ನೀಡಿದ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅಂಗವಿಕಲರು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ, ಸ್ವಾವಲಂಬಿ ಬದುಕು ಕಲ್ಪಿಸುವುದೇ ಬಸವಣ್ಣನವರ ಕಾಯಕ ದಾಸೋಹ ತತ್ವಗಳ ನಿಜವಾದ ಅನುಷ್ಠಾನವಾಗಬೇಕು ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ನ ವಿಭಾಗೀಯ ಮುಖ್ಯಸ್ಥ ಎಂ.ಶಿವರಾಜು ಮಾತನಾಡಿ, ಬಸವಣ್ಣನವರು ಜಾತಿ, ಧರ್ಮ, ವರ್ಗ, ಲಿಂಗಭೇದಗಳನ್ನು ಮೀರಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಅವರ ಆದರ್ಶವನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಗೌರವಯುತ, ಸ್ವಾವಲಂಬಿ ಬದುಕು ಕಲ್ಪಿಸಬೇಕು ಎಂದು ಹೇಳಿದರು.
ಮಂಡ್ಯ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪ್ರಸಾದ್, ಮಹಾರಾಣಿ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಪಿ.ವಿ. ನಾಗರಾಜು, ಪ್ರೊ.ನಂದೀಶ್, ಸಮರ್ಥನಂ ಸಂಸ್ಥೆಯ ಸುಬ್ರಮಣಿ ರಾಜೇಂದ್ರ ಸ್ಪರ್ಶಾ, ಲತಾ, ಚೈತ್ರಕುಮಾರಿ, ಭ್ರಮರಾಂಬ, ಮಂತೇಶ್, ಪದ್ಮಾ, ಬೃಂದಾಬಾಯಿ, ವಿದ್ಯಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.