ಸುತ್ತೂರು: ಶ್ರೀಮಠ ಹಾಗೂ ಗ್ರಾಮದ ಹೊನ್ನೇರುಗಳನ್ನು ಶ್ರೀಮಠದಿಂದ ಮಂಗಳವಾದ್ಯ ಹಾಗೂ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಜಮೀನುಗಳಿಗೆ ತೆಗೆದುಕೊಂಡು ಹೋಗಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ಹೊಸ ವರ್ಷದ ಕೃಷಿ ಕಾಯಕಕ್ಕೆ ಚಾಲನೆ ನೀಡಲಾಯಿತು.
ಸುತ್ತೂರು: ಶ್ರೀಮಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಪಠಣ ಕಾರ್ಯಕ್ರಮಗಳು ಜರುಗಿದವು. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಹಾಗೂ ಪ್ರಾಕಾರೋತ್ಸವಗಳು ನೆರವೇರಿದವು. ಶ್ರೀ ಮಹದೇಶ್ವರ ಸನ್ನಿಧಿ, ಶ್ರೀ ಸೋಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ನಡೆದವು.
ಹೊಳಲ್ಕೆರೆ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಜಿ. ವಿ. ಮಂಜುನಾಥರವರು ಅಲ್ಲಮಪ್ರಭು ಜೀವನ ಮತ್ತು ವಚನ ವೈಭವ ವಿಷಯ ಕುರಿತು ಉಪನ್ಯಾಸ ನೀಡಿ, ಅಲ್ಲಮಪ್ರಭುಗಳ ವಚನಗಳು ಬಹಳ ಶ್ರೇಷ್ಠವಾಗಿವೆ. ಸುಮಾರು 1650ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಚಿಂತಕರಾದ ಅಲ್ಲಮಪ್ರಭುಗಳು ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಂಡು ಸುಜ್ಞಾನವನ್ನು ಬೆಳೆಸಿ, ಕೆಟ್ಟ ಗುಣಗಳಿಂದ ದೂರವಿದ್ದು ಮನಸ್ಸನ್ನು ಜಾಗೃತಗೊಳಿಸಬೇಕು. ಆಗ ಅವನ ಜೀವನ ಸಾರ್ಥಕವಾಗುತ್ತದೆ. ಇವರ ವಚನಗಳು ಬೆಡಗಿನ ವಚನಗಳಾಗಿದ್ದು, ಅಂತಃಕರಣದ ಮನಸ್ಸನ್ನು ತೆರೆಸುತ್ತವೆ. ಮನುಷ್ಯನು ಅತಿಯಾಸೆಯನ್ನು ಬಿಡಬೇಕು. ಹಣ, ಆಸ್ತಿ, ಅಂತಸ್ತು, ಅಧಿಕಾರಕ್ಕಾಗಿ ಹಾತೊರೆಯಬಾರದು. ಅವುಗಳು ತಾವಾಗಿಯೇ ಒಲಿಯುವಂತೆ ಮಾಡಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಅಲ್ಲಮಪ್ರಭುಗಳು ಮೇರು ವ್ಯಕ್ತಿತ್ವದ ದಿಗ್ಗಜರಾಗಿದ್ದಾರೆ. ಅಲ್ಲಮಪ್ರಭುಗಳಿಗೆ ಅಲ್ಲಮಪ್ರಭುಗಳೇ ಸರಿಸಾಟಿಯೆಂದು ಹೇಳಬಹುದು. ಒಂದು ತಕ್ಕಡಿಯಲ್ಲಿ ಶರಣರ ವಚನಗಳನ್ನು ಮತ್ತೊಂದು ತಕ್ಕಡಿಯಲ್ಲಿ ಅಲ್ಲಮಪ್ರಭುಗಳ ವಚನಗಳನ್ನು ತೂಕ ಹಾಕಿದರೆ, ಅಲ್ಲಮಪ್ರಭುಗಳ ವಚನಗಳೇ ಉತ್ಕೃಷ್ಟವಾಗಿರುತ್ತವೆ ಎಂದು ತಿಳಿಸಿದರು.
ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷರು ಹಾಗೂ ಪಂಚಾಂಗಕರ್ತರಾದ ಸಿದ್ಧಾಂತಿ ಡಾ. ಕೆ. ಜಿ. ಪುಟ್ಟಹೊನ್ನಯ್ಯನವರು ಪಂಚಾಂಗ ಪಠಣ ಮಾಡಿ, ಪಂಚಾಂಗವೆಂದರೆ ಐದು ಅಂಗಗಳಿಂದ ರಚಿತವಾಗಿರುತ್ತದೆ. ಪಂಚಾಂಗವನ್ನು ಖಗೋಳ ಶಾಸ್ತ್ರ ಹಾಗೂ ಗಣಿತ ಶಾಸ್ತ್ರಗಳ ಆಧಾರದಲ್ಲಿ ರಚಿಸಲಾಗಿರುತ್ತದೆ. ಒಟ್ಟು 60 ಸಂವತ್ಸರಗಳಿದ್ದು, ಈ ವರ್ಷ ಪರಾಭವ ನಾಮ ಸಂವತ್ಸರವಾಗಿದ್ದು, ದುಷ್ಟ ಶಕ್ತಿಗಳಿಗೆ ಪರಾಭವವನ್ನು ಮಾಡುವ ಸಂವತ್ಸರವಾಗಿದೆ.
ನಂತರ ಪ್ರಶ್ನೋತ್ತರ ಸಂದರ್ಭದಲ್ಲಿ ಬೆಂಗಳೂರು ಶೇಷಾದ್ರಿಪುರಂ ಸಂಸ್ಥೆಗಳ ಕಾರ್ಯದರ್ಶಿಗಳು ಹಾಗೂ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರೂ ಆದ ಡಾ. ಶ್ರೀ ವೂಡೆ ಪಿ ಕೃಷ್ಣ ರವರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದವು ಯಾವಾಗ ಕೊನೆಗೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ, ಪ್ರಸ್ತುತ ದಿನಗಳಲ್ಲಿ ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧವು ಅಂತ್ಯಗೊಳ್ಳಲಿದೆ. ಯಾರು ಅಹಂಕಾರದಿಂದ ಮೆರೆಯುತ್ತಿದ್ದಾರೋ ಅವರಿಗೆ ತಕ್ಕ ಶಾಸ್ತಿಯೂ ಆಗುತ್ತದೆ ಎಂದು ತಿಳಿಸಿದರು.