ಸಾಲಿಗ್ರಾಮದಲ್ಲಿ ಶ್ರೀ ಯೋಗ ನರಸಿಂಹ ಸ್ವಾಮಿ ರಥೋತ್ಸವ ಜರುಗಿತು.
ಸಾಲಿಗ್ರಾಮ: ಪಟ್ಟಣದ ಪ್ರಸಿದ್ಧ ಯೋಗ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು.
ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಶ್ರೀ ಯೋಗ ನರಸಿಂಹಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯವನ್ನು ಅರ್ಚಕ ಶ್ರೀನಿವಾಸ ಅಯ್ಯಂಗಾರ್ ನೇತೃತ್ವದ ತಂಡ ನಡೆಸಿತು.
ಸಾವಿರಾರು ಭಕ್ತರು ಶ್ರೀ ಯೋಗಾನರಸಿಂಹ ಸ್ವಾಮಿಗೆ ಜಯಘೋಷಣೆಗಳನ್ನು ಕೂಗುತ್ತಾ ಉತ್ಸವ ಮೂರ್ತಿ ಕೂರಿಸಿದ್ದ ಬ್ರಹ್ಮ ರಥವನ್ನು ಎಳೆದರು. ರಥವು ಚಿಕ್ಕನಾಯಕನಹಳ್ಳಿ ರಸ್ತೆ ಮಾರ್ಗವಾಗಿ ಹೊಸಬೀದಿ, ಕಾಲುವೆ ಬೀದಿ, ಪೇಟೆ ಬಾಗಿಲಿಗೆ ಬಂದು ನಿಂತಿತು. ಪ್ರತಿ ವರ್ಷದ ವಾಡಿಕೆಯಂತೆ ಒಂದು ಗಂಟೆ ಕಾಲ ಭಕ್ತರಿಗೆ ವಿಶೇಷ ಪೂಜೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಯಿತು. ಮತ್ತೆ ಚುಂಚನಕಟ್ಟೆ ರಸ್ತೆ ಮಾರ್ಗ ಸಾಗಿ ಸುರಕ್ಷಿತವಾಗಿ ಸ್ವಸ್ಥಾನ ತಲುಪಿತು
ಈ ವರ್ಷ ಭಕ್ತರು ಸಂಖ್ಯೆ ಹೆಚ್ಚಾಗಿತ್ತು. ಹರಿಕೆ ಹೊತ್ತ ಭಕ್ತರು ಯೋಗ ನರಸಿಂಹಸ್ವಾಮಿ ಉತ್ಸವಮುರ್ತಿಗೆ ಶ್ರದ್ಧೆ ಪೂಜೆ ಸಲ್ಲಿಸಿದರು. ದಾನಿಗಳು ಭಕ್ತರಿಗೆ ಪ್ರಸಾದ ಮತ್ತು ತಂಪು ಪಾನೀಯಗಳನ್ನು ವಿತರಿಸಿದರು. ಸಾಲಿಗ್ರಾಮ ಪೊಲೀಸರು ಬೀಗಿ ಬಂದೋಬಸ್ತ್ ಮಾಡಿದ್ದರು. ಮಾಜಿ ಸಚಿವ ಸಾ.ರಾ.ಮಹೇಶ್, ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಸಾದ್, ತಹಸೀಲ್ದಾರ್ ರುಕೀಯಾ ಬೆಗಂ, ಪಿಎಂಸಿ ಮಾಜಿ ಅಧ್ಯಕ್ಷ ಕೊಪ್ಪಳ್ಳಿ ಸೋಮು, ಗ್ರಾಪಂ ಮಾಜಿ ಅಧ್ಯಕ್ಷ ವೈನ್ಸ್ ನಟರಾಜ್, ಎಸ್.ಆರ್.ಪ್ರಕಾಶ್, ಅನಂತ್, ನಾಗರಾಜೇಗೌಡ, ಗೋವಿಂದ, ಮಹಾದೇವ, ಕೃಷ್ಣನಾಯಕ.ಕುಮಾರ್, ಜ್ಯೋತಿ, ವೆಂಕಟೇಶ್, ಸಾ.ರಾ.ಗುರುಪ್ರಸಾದ್ ಇತರರು ಇದ್ದರು.