ಮೈಸೂರು ಯೋಗ ಒಕ್ಕೂಟದಿಂದ ನಗರದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಮೂರನೇ ಸಂಕಲ್ಪ ದಿವಸದ ಯೋಗ ಪೂರ್ವಭ್ಯಾಸವನ್ನು ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಟಿ.ಎಸ್.ಶ್ರೀವತ್ಸ, ಶ್ರೀಹರಿ ದ್ವಾರಕನಾಥ್, ರೇಣುಕಾದೇವಿ ಇತರರು ಇದ್ದರು. 
ಮೈಸೂರು

ಪ್ರಾರ್ಥನೆ, ಧ್ಯಾನದ ಸಂಗಮವೇ ಯೋಗ: ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಇಂದಿನ ಒತ್ತಡದ ದಿನಗಳಲ್ಲಿ ಯೋಗಾಭ್ಯಾಸದತ್ತ ಎಲ್ಲರೂ ಮುಖ ಮಾಡಿದ್ದಾರೆ
  • ಹೊಸ ಚಿಂತನೆಗಳಿಂದ ಸಮಾಜವನ್ನು ಸದೃಢಗೊಳಿಸಬೇಕಿದೆ
ಮೈಸೂರು:ಮೈಸೂರಿನಲ್ಲಿ ವಿಶ್ವ ಯೋಗ ದಿನವನ್ನು ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಇದೇ ವ್ಯವಸ್ಥೆ ರಾಜ್ಯಮಟ್ಟಕ್ಕೆ ವಿಸ್ತರಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರು ಯೋಗ ಒಕ್ಕೂಟದಿಂದ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ 3ನೇ ಸಂಕಲ್ಪ ದಿವಸದ ಯೋಗ ಪೂರ್ವಭ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಯೋಗ, ಎಲ್ಲ ಕಡೆಗೆ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಮುಂದಿನ ವರ್ಷ ರಾಜ್ಯಾದ್ಯಂತ 2 ಕೋಟಿ ಜನ ಯೋಗಾಭ್ಯಾಸ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಇಂದಿನ ಒತ್ತಡದ ದಿನಗಳಲ್ಲಿ ಯೋಗಾಭ್ಯಾಸದತ್ತ ಎಲ್ಲರೂ ಮುಖ ಮಾಡಿದ್ದಾರೆ. ಇದು ವ್ಯಕ್ತಿಯ ಶಾರಿರಿಕ ಅಂಗಸಾಧನೆಯಾದರೂ ಸಾರ್ವಜನಿಕವಾಗಿ ಇಡೀ ಸಮಾಜ ಪಾಲ್ಗೊಳ್ಳುವುದರಿಂದ ಎಲ್ಲರಲ್ಲೂ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಕೋವಿಡ್ ನಂತರದ ಕಾಲಮಾನದಲ್ಲಿ ಸಾಮಾಜಿಕವಾಗಿ ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಹೊಸ ಚಿಂತನೆಗಳಿಂದ ಸಮಾಜವನ್ನು ಸದೃಢಗೊಳಿಸಬೇಕಿದೆ ಎಂದರು.
ಎಲ್ಲ ಧರ್ಮಗಳಲ್ಲೂ ಒಳ್ಳೆಯ ಸಂದೇಶಗಳು ಇರುತ್ತವೆ. ಪ್ರಾರ್ಥನೆ ಹಾಗೂ ಧ್ಯಾನದ ಸಂಗಮವೇ ಯೋಗಾಭ್ಯಾಸವಾಗಿದೆ. ನಗರ ಪ್ರದೇಶಗಳಲ್ಲಿ ಯುವಜನತೆ ವ್ಯಸನಿಗಳಾಗುತ್ತಿರುವುದು ಬೇಸರವಾಗುತ್ತದೆ. ಎಲ್ಲ ದುಷ್ಟಗಳನ್ನು ದೂರವಾಗಿಸಿಕೊಳ್ಳಲು ವಯಸ್ಸಿನ ಇತಿಮಿತಿ ಇಲ್ಲದೆ ಸರ್ವ ಜನರ ಆರೋಗ್ಯ ಹಾಗೂ ದೈಹಿಕ ಚಲನಶೀಲತೆ ಹೆಚ್ಚಿಸುವ ಯೋಗವನ್ನು ಎಲ್ಲರೂ ಅನುಸರಿಸಬೇಕು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಯೋಗದಲ್ಲಿ ಇನ್ನು ಹೆಚ್ಚಿನ ಗಮನ ಸೆಳೆಯಿತು ಎಂದರು.
ಪ್ರತಿ ವರ್ಷ ಮೈಸೂರಿನ ಯೋಗ ಕಾರ್ಯಕ್ರಮವನ್ನು ಇತರೆ ರಾಜ್ಯಗಳು ಮಾದರಿಯನ್ನಾಗಿ ಅಳವಡಿಸಿಕೊಳ್ಳುತ್ತಿವೆ. ನಾನು ಪ್ರತಿದಿನವೂ ಯೋಗದ ಕೆಲವು ಆಸನಗಳನ್ನು ಅಭ್ಯಾಸಿಸುತ್ತಿದ್ದೇನೆ. ಇಂತಹ ಮೈಸೂರು ನಗರದ ಶಾಸಕನಾಗಿರುವುದು ನನ್ನ ಅದೃಷ್ಟವೇ ಸರಿ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ಮಾತನಾಡಿ, ರಾಜ್ಯದ ಆರೋಗ್ಯ, ಯೋಗ ಯೋಜನೆಯಲ್ಲಿ ಮೈಸೂರು ಜಿಲ್ಲೆ ಹಾಗೂ ನಂಜನಗೂಡು ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದರು.
ಮೈಸೂರು ಯೋಗ ಒಕ್ಕೂಟದ ಕಾರ್ಯದರ್ಶಿಯಾದ ಜಿಎಸ್‌ಎಸ್ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಮಾತನಾಡಿ, ಪ್ರತಿವರ್ಷ ಯೋಗ ದಿನವನ್ನು ವಿಶಿಷ್ಟವಾಗಿ ಮೈಸೂರಿನಲ್ಲಿ ಎಲ್ಲ ಯೋಗ ಸಂಸ್ಥೆಗಳು, ಸಾರ್ವಜನಿಕರ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ಒಂದೆಡೆ ಲಕ್ಷಾಂತರ ಜನರು ಸೇರುವುದರ ಬದಲು ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು, ಸಂಘ- ಸಂಸ್ಥೆಗಳು, ದೇವಸ್ಥಾನಗಳು, ಸಾರ್ವಜನಿಕ ಮೈದಾನ, ಸರ್ಕಾರಿ ಕಚೇರಿಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಮೂಹಿಕವಾಗಿ ಯೋಗ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತ ಅಂತಾರಾಷ್ಟ್ರೀಯ ಯೋಗ ಕೇಂದ್ರ ಮುಖ್ಯಸ್ಥ ರಾಮೇಶ್ವರ ರಾಜು, ಭಾರತ್ ಸ್ವಾಭಿಮಾನ ಟ್ರಸ್ಟ್‌ನ ಮಧು, ಯೋಗ ಸ್ಪೋರ್ಟ್ಸ್ ಫೆಡರೇಷನ್‌ನ ಗಣೇಶ್‌ಕುಮಾರ್, ಮೈಸೂರು ಯೋಗ ಒಕ್ಕೂಟದ ದೇವರಾಜ್, ಶಿವಪ್ರಕಾಶ್, ಪಶುಪತಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ನಂಜುಂಡಸ್ವಾಮಿ, ಮೃತ್ಯುಂಜಯ ಇತರರು ಇದ್ದರು.