ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್‌ನಲ್ಲಿ ವಿವೇಕಾನಂದ ಯೋಗ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗಾಸನ.
- ಲಕ್ಷ್ಮೀ ಶ್ರೀನಿವಾಸ ಗುರೂಜಿ ಅಭಿಪ್ರಾಯ
- ರಾಷ್ಟ್ರೀಯ ಕ್ರೀಡಾ ಚಾಂಪಿಯನ್‌ಷಿಪ್
- ಮೈಸೂರಿನಲ್ಲಿ ರಾಜರ ಕಾಲದಿಂದಲೂ ಯೋಗಕ್ಕೆ ಉತ್ತೇಜನ
ಮೈಸೂರು: ಪ್ರತಿ ಮನೆಯಲ್ಲೊಬ್ಬ ಯೋಗಪಟು ಇರಬೇಕು. ಆ ರೀತಿಯಲ್ಲಿ ಯೋಗ ಪ್ರಚಾರವಾಗಬೇಕು ಎಂದು ಬೆಂಗಳೂರು ಶ್ರೀಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕ ಲಕ್ಷ್ಮೀ ಶ್ರೀನಿವಾಸ ಗುರೂಜಿ ಹೇಳಿದರು.
ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಾನವ ಯೋಗ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ, ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಬಂಡವಾಳವಿಲ್ಲದೆ ರೋಗವನ್ನು ಗುಣಪಡಿಸುವ ಚಿಕಿತ್ಸೆ ಎಂದರೆ ಯೋಗ ಮತ್ತು ಪ್ರಾಣಾಯಾಮವಾಗಿದೆ. ಹಿಂದೆ ಕಾಲರಾ, ದಡಾರ, ಸಿಡುಬು ಮೊದಲಾದ ರೋಗಗಳು ಹರಡುತ್ತಿದ್ದವು. ಆಗ ಸಾಮಾನ್ಯವಾಗಿ ಪೂಜೆ ಮಾಡಿದರೆ ಹೋಗುತ್ತದೆ ಎಂದು ನಂಬಿಕೆಯಿತ್ತು.
ಇನ್ನೂ ಕೆಲವರು ಆಗಲೂ ಯೋಗ ಮಾಡಿ, ದೈಹಿಕ ಕಸರತ್ತು ಮಾಡಿ ಎಂದು ಸೂಚಿಸುತ್ತಿದ್ದರು. ಈಗ ಆ ರೀತಿಯ ರೋಗಗಳಿಲ್ಲ. ಆದರೆ, ಯೋಗ ಮಾಡಿದರೆ ರೋಗಗಳಿಂದ ದೂರ ಇರಬಹುದು. ಆಸ್ಪತ್ರೆಗಳಿಗೆ ಲಕ್ಷಾಂತರ ರೂ. ಕಟ್ಟುವುದನ್ನು ತಡೆಯಬಹುದು ಎಂದರು.
ಮೈಸೂರಿನಲ್ಲಿ ರಾಜರ ಕಾಲದಿಂದಲೂ ಯೋಗಕ್ಕೆ ಉತ್ತೇಜನ ನೀಡಲಾಗಿದೆ. ಬಿಕೆಎಸ್ ಅಯ್ಯಂಗಾರ್, ಕೃಷ್ಣಮಾಚಾರ್ ಇನ್ನಿತರರು ಯೋಗವನ್ನು ಉಳಿಸಿ ಬೆಳೆಸಿದರು ಎಂದು ಸ್ಮರಿಸಿದರು.
ಪಾಶ್ಚಿಮಾತ್ಯ ದೇಶಗಳು ಆರ್ಥಿಕವಾಗಿ ಪ್ರಗತಿ ಹೊಂದಿವೆ. ಅಲ್ಲಿ ಆರೋಗ್ಯ ಇರುವುದಿಲ್ಲ. ಹೀಗಾಗಿ ಅಲ್ಲಿ ಯೋಗಕ್ಕೆ ಬೇಡಿಕೆ ಬಂದಿದೆ. ನಮ್ಮಲ್ಲಿ ಯೋಗ ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಉದ್ಯಮಿ ಗೋವಿಂದೇಗೌಡ ಮಾತನಾಡಿ, ತಮಗೆ ಯೋಗದಿಂದ ಮಧುಮೇಹ ನಿಯಂತ್ರಣಕ್ಕೆ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.
ಜಿಎಸ್‌ಎಸ್ ಪ್ರತಿಷ್ಠಾನ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ಸಿಪಿಸಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಎಸ್.ಕೆ. ರಾಜೇಗೌಡ, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಪಿ.ಎನ್. ಗಣೇಶ್ ಕುಮಾರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್, ಕಾರ್ಯಾಧ್ಯಕ್ಷ ಬಿ.ಪಿ. ಮೂರ್ತಿ ಗೋಪಾಲರಾಜು ಇನ್ನಿತರರಿದ್ದರು. ವಿವೇಕಾನಂದ ಯೋಗ ಸಂಸ್ಥೆಯ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿ ಹಾಗೂ ನೃತ್ಯ ಪ್ರದರ್ಶಿಸಿದರು.