ನಗರದ ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಯೋಗ ದಸರಾ yoga DASARA
ಮೈಸೂರು

ಸ್ಫೂರ್ತಿಯ ಸಂಕೇತವಾದ 'ಯೋಗ ದಸರಾ'

ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಪ್ರತಿಭೆ ಅನಾವರಣ

ಎ.ಆರ್. ರಘುರಾಮ ಮೈಸೂರು

ಕೂರ್ಮಾಸನ, ಮತ್ಸಾೃಸನ, ಶೀರ್ಷಾಸನ, ಉತ್ಥಾನಪಾದಾಸನ, ಅಧೋಮುಖ ಶ್ವಾನಾಸನ- ಇವುಗಳನ್ನು ನೋಡಲು ಚಂದ. ಆದರೆ ಮಾಡುವಲ್ಲಿ ಶ್ರದ್ಧೆ, ಶ್ರಮ ಮತ್ತು ನಿತ್ಯದ ಅಭ್ಯಾಸಗಳೂ ಅಷ್ಟೇ ಪ್ರಮುಖ. ಯೋಗ ಸಾಧನೆಯಲ್ಲಿರುವ ಯುವ ಸಾಧಕರನ್ನು ಒಂದೇ ವೇದಿಕೆಯಲ್ಲಿ ಆಸನ ಭಂಗಿಯಲ್ಲಿ ನೋಡುವುದೇ ಒಂದು ಸೊಗಸು. ....

ಗುಂಪು ಪ್ರದರ್ಶನದಲ್ಲಿ ಕ್ಷಣದಿಂದ ಕ್ಷಣಕ್ಕೆ ವಿವಿಧ ಭಂಗಿಗಳನ್ನು ಮಾಡುವುದು, ದೇಹವನ್ನು ರಬ್ಬರಿನಂತೆ ಬಾಗಿಸಿ, ಬಳುಕಿಸಿ ಆಸನದ ವೈವಿಧ್ಯವನ್ನು ತೋರುವುದು, ಮರು ಕ್ಷಣದಲ್ಲೇ ವಿನ್ಯಾಸಗಳನ್ನು ಬದಲಾಯಿಸಿ ಪ್ರೇಕ್ಷಕರಲ್ಲಿ ಬೆರಗು ಮತ್ತು ಅಚ್ಚರಿಗಳನ್ನು ಮೂಡಿಸುತ್ತಲೇ ಯೋಗಾಭ್ಯಾಸಕ್ಕೆ ಪ್ರೇರೇಪಿಸಿದ ಯೋಗಪಟುಗಳ ಚಾಕಚಕ್ಯತೆಗಳು ಚಪ್ಪಾಳೆ ಸುರಿಮಳೆ ಗಿಟ್ಟಿಸಿದವು. ರಾಜ್ಯದ ಹಲವು ಭಾಗದ ನುರಿತ ಯೋಗ ಗುರುಗಳ ಬಳಿ ಪಳಗಿದ ಮಕ್ಕಳು ಮತ್ತು ಯುವಜನರ 12ಕ್ಕೂ ಹೆಚ್ಚು ತಂಡಗಳ ಯೋಗ ಪ್ರದರ್ಶನಕ್ಕೆ ಸುಶ್ರಾವ್ಯವಾದ ಹಿನ್ನೆಲೆ ಸಂಗೀತವೂ ಮಿಳಿತಗೊಂಡಿದ್ದರಿಂದ ಕಾರ್ಯಕ್ರಮಕ್ಕೆ ಹೊಸ ಮೆರುಗು ದೊರಕಿತು. ಇವೆಲ್ಲವೂ ಮಿಳಿತಗೊಂಡಿದ್ದು ಯೋಗ ದಸರಾ ವೇದಿಕೆಯಲ್ಲಿ. ದಸರಾ ಎಂದರೆ ಕೇವಲ ಸಾಂಸ್ಕೃತಿಕ ಉತ್ಸವ ಅಲ್ಲ. ಜೀವನವನ್ನು ಸದಾ ಚೇತೋಹಾರಿಯಾಗಿ ಇಡುವಲ್ಲಿ ದೇಹ ಮತ್ತು ಮನಸ್ಸುಗಳನ್ನು ಅಣಿಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಭಾರತೀಯ ಮೂಲದ ಯೋಗ ವಿದ್ಯೆಗೆ ಮಹರಾಜರ ಕಾಲದಿಂದಲೂ ನೆಲೆ ಕಲ್ಪಿಸಿದ ಮೈಸೂರಿನಲ್ಲಿ ಬುಧವಾರ ಯೋಗ ಪ್ರದರ್ಶನಕ್ಕೊಂದು ವಿಭಿನ್ನ ಮತ್ತು ರಂಜನೀಯ ವೇದಿಕೆ ರೂಪಿತಗೊಂಡಿತ್ತು.

ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಯೋಗ ದಸರಾಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಧ್ಯುಕ್ತ ಚಾಲನೆ ನೀಡಿದ ನಂತರ ಸಾಧಕರ ಪ್ರತಿಭೆ ಅನಾವರಣಗೊಂಡಿದ್ದು ವಿಶೇಷವಾಗಿತ್ತು.

ತಜ್ಞರಿಂದ ವಿಚಾರ ಮಂಡನೆ ::::

ಆರೋಗ್ಯಕರ ಜೀವನ, ನೋವು ರಹಿತ ಬದುಕಿಗಾಗಿ ಯೋಗ, ನರ ಮಾರ್ಗಗಳ ನಿರ್ವಹಣೆ- ಪ್ರಾಯೋಗಿಕ ವಿಧಾನ, ಯೋಗ ಪರಿಕಲ್ಪನೆ ಮತ್ತು ವೈಜ್ಞಾನಿಕ ಸಾಕ್ಷಾೃಧಾರಗಳು ವಿಷಯ ಕುರಿತು ವಿಚಾರಸಂಕಿರಣದಲ್ಲಿ ಯೋಗ ತಜ್ಞರಾದ ಡಾ. ಸುಜನ್, ಡಾ. ಸುಧಾರಕ ರೆಡ್ಡಿ, ಡಾ. ಹರೀಶ ಬಾಬು, ಡಾ. ಪಿ.ಜಿ.ಅರುಣ್ ಅವರು ಹರಿಸಿದ ವಿಚಾರ ಲಹರಿ ಜ್ಞಾನಪ್ರಚೋದಕವಾಗಿತ್ತು.

ಸಾಮೂಹಿಕ ಯೋಗ ಸ್ಫೂರ್ತಿ ಸಂಕೇತ

  • ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಶ್ರೀವತ್ಸ ಅಭಿಮತ

ಧನಾತ್ಮಕ ಆಲೋಚನೆಗಳು ನಮ್ಮದಾಗಲು ಯೋಗ ಪ್ರೇರಕ ಎಂದು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಶ್ರೀವತ್ಸ ಹೇಳಿದರು. ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಯೋಗ ದಸರಾ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಯೋಗ ಎಂಬುದು ಕೇವಲ ಮಾತಿನಿಂದ ಅಲ್ಲ, ಕೃತಿಯಲ್ಲಿ ಇರಬೇಕು. ಆಸನಗಳನ್ನು ಮಾಡಿ ನಾವು ಯೋಗ ಸಾಧಕರು ಎಂದು ಹೇಳಿಕೊಳ್ಳುವುದಲ್ಲ, ಅಷ್ಟಾಂಗ ಯೋಗದಿಂದ ವ್ಯಕ್ತಿತ್ವ ನಿರ್ಮಾಣ ಆಗಬೇಕು. ಆಗ ಮಾತ್ರ ಯೋಗದ ಅನುಷ್ಠಾನ ಸಾರ್ಥಕವಾಗುತ್ತದೆ. ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.

ಸಾಮೂಹಿಕವಾಗಿ ಯೋಗ ಮಾಡುವುದು ಸ್ಫೂರ್ತಿ ಸಂಕೇತ. ಆದರೆ ಯೋಗ ಎಂಬುದು ವ್ಯಕ್ತನಿಷ್ಠ, ವಯಕ್ತಿಕ ಆಗಬೇಕು. ಇದು ನಮಗೇ ಅನ್ವಯವಾದಾಗ ಮಾತ್ರ ಹಲವು ಅನುಕೂಲ ಪಡೆಯಲು ಸಾಧ್ಯ ಎಂದರು.

ಸಭೆ, ಸಮಾರಂಭ, ಸಮ್ಮೇಳನ ಮತ್ತು ವಿಚಾರಸಂಕಿರಣಗಳು ಯೋಗಕ್ಕೆ ಬೆಂಬಲ ನೀಡುತ್ತವೆ. ದೈನಂದಿನ ಬದುಕಿನಲ್ಲಿ ಜೀವನದ ಉದ್ದಕ್ಕೂ ಯೋಗವೆಂಬುದು ನಮ್ಮ ಸಂಗಾತಿ ಆಗಬೇಕು. ಗುರು ಮುಖೇನ ಕಲಿಕೆಯಾದಾಗ ಮಾತ್ರ ನಾವು ಉನ್ನತಿಗೇರಲು ಸಾಧ್ಯ ಎಂದು ಡಾ. ಶ್ರೀವತ್ಸ ಹೇಳಿದರು.

ಮನೆ ಮನೆಗೆ ಯೋಗ ತಲುಪಲಿ:

ವಿವೇಕಾನಂದ ಯೋಗ ಎಜಕೇಷನ್ ಆ್ಯಂಡ್ ರಿಸರ್ಚ್ ಸೆಂಟರ್ ನಿರ್ದೇಶಕ, ಹಿರಿಯ ಯೋಗ ಗುರು ಡಾ. ಪಿ.ಎನ್. ಗಣೇಶ್ ಕುಮಾರ್ ಮಾತನಾಡಿ, ದಸರಾ ಸಂದರ್ಭ ಜನಸಾಮಾನ್ಯರಿಗೆ ಯೋಗ ತಲುಪುವ ನಿಟ್ಟಿನಲ್ಲಿ ವೈವಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು. ಪ್ರಧಾನಿ ಮೋದಿ ಅವರ ಆಶಯದಂತೆ ಮನೆ ಮನೆಗೆ ಯೋಗ ತಲುಪಿಸುವ ಜವಾಬ್ದಾರಿ ನಮ್ಮಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ ಎಂದರು.

ದಿನಚರಿಯ ಭಾಗವಾಗಲಿ: ಯೋಗ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಕೆ. ರಮ್ಯಾ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಯೋಗವನ್ನು ದಿನಚರಿ ಭಾಗವನ್ನಾಗಿಸಿಕೊಳ್ಳಬೇಕು ಎಂದರು. ಯೋಗ ದಸರಾ ಅಧಿಕಾರೇತರ ಸಮಿತಿ ಅಧ್ಯಕ್ಷ ಕಾಂತರಾಜು, ಯುನಾನಿ ಮತ್ತು ನ್ಯಾಚುರೋಪತಿ ಆಸ್ಪತ್ರೆ ಮುಖ್ಯಸ್ಥ ಡಾ. ವೆಂಕಟಕೃಷ್ಣ, ಡಾ. ವಾಣಿಶ್ರೀ, ಡಾ. ದೇವಾನಂದ, ಉಪ ಸಮಿತಿ ಸದಸ್ಯರಾದ ಮಹೇಶ್, ಶ್ರೀಕಂಠ, ಸಮೀರ್ ಅಹ್ಮದ್ ಇತರರು ಹಾಜರಿದ್ದರು. ಯೋಗ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭ ಗೌರವಿಸಲಾಯಿತು.

* ವಿವಿಧೆಡೆ ಕಾರ್ಯಕ್ರಮ: ಯೋಗ ದಸರಾ ಅಂಗವಾಗಿ 16ರಂದು ಬೆಳಗ್ಗೆ 8ರಿಂದ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ, 18ರಂದು ಬೆಳಗ್ಗೆ 6ರಿಂದ ನಂಜನಗೂಡಿನ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ಗ್ರಾಮೀಣ ಯೋಗ ದಸರಾ, 19ರಂದು ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇಗುಲ ಆವರಣದಲ್ಲಿ ಬೆಳಗ್ಗೆ 6ರಿಂದ ಯೋಗ ಚಾರಣ ಮತ್ತು ಸಾಮೂಹಿಕ ದುರ್ಗಾ ನಮಸ್ಕಾರ ಕಾರ್ಯಕ್ರಮ ಆಯೋಜನೆಗೊಂಡಿದೆ. ನೂರಾರು ಯೋಗ ಪಟುಗಳು ಮತ್ತು ಯೋಗ ಗುರುಗಳು ಭಾಗವಹಿಸಲಿರುವುದು ವಿಶೇಷ.

ನಗರದ ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಯೋಗ ದಸರಾ ಉದ್ಘಾಟನೆ ಸಂದರ್ಭ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಶ್ರೀವತ್ಸ,ಯೋಗ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಕೆ. ರಮ್ಯಾ, ಡಾ. ಗಣೇಶ್ ಕುಮಾರ್, ಡಾ. ವಾಣಿಶ್ರೀ, ಡಾ. ವೆಂಕಟಕೃಷ್ಣ, ಕಾಂತರಾಜು ಇತರರು ಇದ್ದರು.