ಭಾರತೀಯ ಭಾಷಾ ಸಂಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಪ್ರೊ.ಎನ್.ಕೆ. ಲೋಕನಾಥ್, ಪ್ರೊ. ಶೈಲೇಂದ್ರ ಮೋಹನ್, ಡಾ.ಎಲ್.ಆರ್. ಪ್ರೇಮ್ ಕುಮಾರ್ ಇದ್ದರು.
ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಕೊಡಿಸಲು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ವತಿಯಿಂದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ವಾಯತ್ತತೆ ಪಡೆಯುವ ವಿಚಾರದಲ್ಲಿ ಹೋರಾಟದ ಅವಶ್ಯಕತೆ ಏನು ಇಲ್ಲ. ಕೇಂದ್ರ ಸರ್ಕಾರದಿಂದ ಈ ವಿಚಾರವಾಗಿ ನಿರ್ಣಯವೊಂದು ಆಗಬೇಕಾಗಿದೆ. ಅದೊಂದು ಸಣ್ಣ ಪ್ರಕ್ರಿಯೆಯಾಗಿದ್ದು, ಅದನ್ನು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಜಾಗ ನೀಡಿದೆ. ಕೇಂದ್ರಕ್ಕೆ ಸ್ವಾಯತ್ತತೆ ದೊರೆತು ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಮೂಲಕ ಬೇರೆ ಭಾಷೆಗಳ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೆ ನಮ್ಮ ಕೇಂದ್ರ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರನ್ನು ನಾವೆಲ್ಲರು ಸದಾ ಸ್ಮರಿಸಿಬೇಕು. ಕನ್ನಡ ನಾಡು ಒಗ್ಗೂಡಲು ಅವರು ಪ್ರಮುಖ ಕಾರಣ. ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಕಟ್ಟಡಗಳಲ್ಲಿ ಬಸವಣ್ಣ, ಕುವೆಂಪು ಸೇರಿದಂತೆ ಹಲವಾರು ಮಹನೀಯರ ಭಾವಚಿತ್ರಗಳು ಇದ್ದು, ಇದರ ಜತೆಗೆ ಆಲೂರು ವೆಂಕಟರಾಯರ ಫೋಟೋವನ್ನು ಸಹ ಹಾಕಬೇಕು ಎಂದರು.
ಹಲವು ಜನರ ತ್ಯಾಗದ ಫಲವಾಗಿ ಕನ್ನಡನಾಡು ರೂಪುಗೊಂಡಿದೆ. ಹಾಗಾಗಿ ಕನ್ನಡನಾಡು ಒಗ್ಗೂಡಿಸಲು ಶ್ರಮಿಸಿದ ಎಲ್ಲ ಮಹನೀಯರನ್ನು ನಾವು ಸ್ಮರಿಸುವ ಜತೆಗೆ ಕನ್ನಡನಾಡಿನ ಭವಿಷ್ಯವನ್ನು ನಾವು ಯಾವ ರೀತಿ ರೂಪಿಸಬೇಕು ಎಂಬ ಕುರಿತು ಆಲೋಚಿಸಬೇಕು ಎಂದು ಹೇಳಿದರು.
ದೇಶದಲ್ಲಿ ಅತ್ಯುತ್ತಮ ಸೌಲಭ್ಯಗಳು ಸೃಷ್ಟಿಯಾಗುತ್ತಿದೆ. ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಹಾಗೂ ಅತ್ಯುತ್ತಮ ರಸ್ತೆಗಳು ನಿರ್ಮಾಣ ವಾಗುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಕನ್ನಡಿಗರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದನ್ನು ಕಲಿಯಬೇಕು. ಹೆದ್ದಾರಿಯನ್ನು ಕೇವಲ ಸುತ್ತಾಡಲು ಬಳಕೆ ಮಾಡುವ ಬದಲು ಆರ್ಥಿಕ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡಿಗರು ಕನ್ನಡ ಭಾಷೆಯ ಜತೆಗೆ ವಿವಿಧ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು. ಯುರೋಪಿಯನ್ ಮಕ್ಕಳ ಮಾನಸಿಕ ಸಾಮರ್ಥ್ಯ ಉಳಿದ ಮಕ್ಕಳ ಸಾಮರ್ಥ್ಯಕ್ಕಿಂತ ಹೆಚ್ಚು ಇದೆ ಎಂಬುದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಸ್ವಿಟ್ಜಾರ್ಲ್ಯಾಂಡ್ ನಲ್ಲಿರುವ ಮಕ್ಕಳು ಫ್ರೆಂಚ್, ಜರ್ಮನ್, ಸ್ಪಾೃನಿಷ್ ಹಾಗೂ ಇಂಗ್ಲಿಷ್ ಕಲಿಯುತ್ತಾರೆ. ಹಾಗಾಗಿ ಅವರ ಮಾನಸಿಕ ಸಾಮರ್ಥ್ಯ ಹೆಚ್ಚು ಇರುತ್ತದೆ. ನಮ್ಮ ಮಕ್ಕಳು ಕನ್ನಡದ ಜತೆಗೆ ಇಂಗ್ಲಿಷ್, ಹಿಂದಿ ಹಾಗೂ ನಮ್ಮ ನೆರೆಯ ರಾಜ್ಯಗಳ ಭಾಷೆಗಳನ್ನು ಕಲಿತರೆ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ವಿವಿಧ ಭಾಷೆಗಳನ್ನು ಕಲಿತರೆ ಆ ಭಾಷೆಗಳನ್ನು ನಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಸಂಸ್ಥೆಯ ಶಾಸ್ತ್ರೀಯ ಭಾಷಾ ವಿಭಾಗದ ಸಂಯೋಜಕ ಡಾ.ಎಲ್.ಆರ್. ಪ್ರೇಮ್ ಕುಮಾರ್ ಇದ್ದರು.