World Child Labor Day 
ಮೈಸೂರು

ಜೂ.12ರಂದು ವಿಶ್ವ ಬಾಲಕಾರ್ಮಿಕ ದಿನ ಅರ್ಥಪೂರ್ಣ ಆಚರಣೆ

ಜಿಲ್ಲಾಡಳಿತದ ವತಿಯಿಂದ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜೂನ್ 12ರಂದು ಬೆಳಗ್ಗೆ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪೀಪಲ್ಸ್ ಪಾರ್ಕ್‌ವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಹಾಗೂ ವೀರಗಾಸೆ ಕಲಾ ತಂಡಗಳು ಜಾಥಾದಲ್ಲಿ ಭಾಗವಹಿಸಿ ಜಾಥಾಗೆ ವಿಶೇಷ ಮೆರುಗು ನೀಡಲಿವೆ ಎಂದು ಹೇಳಿದರು.
ಅಂದು ಬೆಳಗ್ಗೆ 11 ಗಂಟೆಗೆ ಪೀಪಲ್ಸ್ ಪಾರ್ಕ್‌ನಲ್ಲಿ ಪ್ರಧಾನ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸ್ವಯಂ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ‘ಪ್ರಮಾಣ ವಚನ’ ಸ್ವೀಕರಿಸಲಾಗುವುದು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿದರು.
ಜಾಥಾ ಸಂದರ್ಭದಲ್ಲಿ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986ರ ಕುರಿತು ಮಾಹಿತಿಯಿರುವ ಕರಪತ್ರಗಳನ್ನು ಹಂಚುವುದರ ಮೂಲಕ ವ್ಯಾಪಕ ಜಾಗೃತಿ ಮೂಡಿಸಿ ಎಂದರು.
ಮೈಸೂರು ನಗರ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಡಂಗೂರ’ ಸಾರಿಸುವ ಮೂಲಕ ಮತ್ತು ಸ್ಥಳೀಯ ಕಸ ವಿಲೇವಾರಿ ವಾಹನಗಳ ಧ್ವನಿವರ್ಧಕಗಳ ಮೂಲಕ ಉಚಿತವಾಗಿ ಬಾಲಕಾರ್ಮಿಕ ವಿರೋಧಿ ಘೋಷಣೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಬಾಲಕಾರ್ಮಿಕ ಪದ್ಧತಿ ವಿರೋಧಿ ಕುರಿತು ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಾಲಕಾರ್ಮಿಕ ಕಿಶೋರ ಕಾರ್ಮಿಕ ಕಾಯ್ದೆ 1986 ಕಲಂ 17ರಡಿ ನೇಮಕಗೊಂಡ ಅಧಿಕಾರಿಗಳ ತಂಡದ ಸಹಭಾಗಿತ್ವದಲ್ಲಿ ತಾಲೂಕುವಾರು ಬಾಲ/ಕಿಶೋರ ಕಾರ್ಮಿಕ ರಕ್ಷಣಾ ಅಭಿಯಾನವನ್ನು ಹಮ್ಮಿಕೊಂಡು ಬಾಲ/ಕಿಶೋರ ಕಾರ್ಮಿಕರ ರಕ್ಷಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಲಲಿತಾಬಾಯಿ, ಮೈಸೂರು ವಿಭಾಗದ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್, ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಇತರರಿದ್ದರು.