ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರ ತರಬೇತಿ ಕಾರ್ಯಾಗಾರದಲ್ಲಿ ಎಸ್.ಯುಕೇಶ್ ಕುಮಾರ್, ಕೆ.ಪಿ.ಪ್ರಭುಸ್ವಾಮಿ, ಡಾ. ನವಿತಾ ತಿಮ್ಮಯ್ಯ ಹಾಗೂ ಇತರರು ಇದ್ದರು.
ಮೈಸೂರು: ಮಾನವ ಅಭಿವೃದ್ಧಿ ವರದಿಯನ್ನು ಸಂಬಂಧಿಸಿದ ಇಲಾಖೆಗಳು ನಿಖರವಾಗಿ ನೀಡಬೇಕು, ಇದು ಮುಂದಿನ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ನಿಖರವಾಗಿ ತಯಾರಿಸಬೇಕು. ಇದೇ ಅಂಕಿ ಅಂಶದ ಆಧಾರದ ಮೇಲೆ ಮುಂದಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ಫೆಬ್ರವರಿ 10 ರೊಳಗೆ ವರದಿಯನ್ನು ನೀಡಬೇಕು ಎಂದರು.
ಇಲಾಖೆಗಳಿಗೆ ಬಂದಿರುವ ಅನುದಾನ ಯಾವುದೇ ರೀತಿ ವ್ಯರ್ಥವಾಗಬಾರದು. ಅನುದಾನ ಮಾರ್ಚ್ ವೇಳೆಗೆ ಶೇ.100 ರಷ್ಟು ಸದ್ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಯೋಜನೆ ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಎಸ್‌ಐಆರ್‌ಡಿ ಸಂಸ್ಥೆಯ ಸಮಾಲೋಚಕ ಗಣೇಶ್ ಪ್ರಸಾದ್ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆಯು ದೇಶದ ಪ್ರಗತಿಯನ್ನು ತಿಳಿಸುವ ಕನ್ನಡಿಯಾಗಿರುತ್ತದೆ. 16ನೇ ಹಣಕಾಸು ಆಯೋಗದ ಅನುದಾನ ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ. ಇದು 2026 ರಿಂದ 2031 ರವರೆಗೆ ಇರುತ್ತದೆ. ಮಾನವ ಅಭಿವೃದ್ಧಿ ವರದಿಯ ಆಧಾರದ ಮೇಲೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಹಂಚಿಕೆ ಆಗುತ್ತದೆ. ಅಲ್ಲದೆ 2026ರಲ್ಲೇ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುತ್ತವೆ. ಇದರ ಅವಧಿಯು 2026 ರಿಂದ 2031ರವರೆಗೆ ಇರುತ್ತದೆ ಎಂದು ತಿಳಿಸಿದರು.
ತಾಯಂದಿರ ಮರಣ, ಶಿಶು ಮರಣ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಇವುಗಳನ್ನು ನಿಖರವಾಗಿ ದಾಖಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 17 ಮಾನದಂಡಗಳನ್ನು ಗುರುತಿಸಿ ನೀಡಲಾಗಿದೆ. ಅದರ ಆಧಾರದ ಮೇಲೆ ವರದಿ ತಯಾರಿಸಬೇಕು. ಜೀವನದ ಗುಣಮಟ್ಟ, ಶಿಕ್ಷಣ ಮತ್ತು ಆರೋಗ್ಯವನ್ನು ಮೂಲ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಶೇ.26 ರಷ್ಟು ಜನರು ಇದ್ದಾರೆ. ದೇಶದಲ್ಲಿ ಶೇ.80 ರಷ್ಟು ಸಾಕ್ಷರತೆ ಇದ್ದು, ಆಹಾರ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ಇದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಪ್ರತಿ 10 ವರ್ಷಕ್ಕೆ ಒಮ್ಮೆ ಜನಗಣತಿ ಮಾಡಲಾಗುತ್ತದೆ. ರೈಲ್ವೆ ಸಾರಿಗೆಯಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದೇವೆ. ಆರೋಗ್ಯ ಸೇವೆ ಉತ್ತಮವಾಗಿದೆ. ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಸಹ ಹಲವು ಕೊರತೆಗಳನ್ನು ಸಹ ಎದುರಿಸುತ್ತಿದೆ ಎಂದರು.
ಮಾನವ ಅಭಿವೃದ್ಧಿ ಸೂಚ್ಯಂಕ 0-1 ವರೆಗೆ ಮಾಡಲಾಗುತ್ತದೆ. ರಾಜ್ಯಮಟ್ಟದ ಮಾನವ ಅಭಿವೃದ್ಧಿಯನ್ನು ಮೊದಲ ಬಾರಿಗೆ ಮಧ್ಯಪ್ರದೇಶ 1999ರಲ್ಲಿ ಸಿದ್ಧ ಪಡಿಸಿತು. ನಂತರ 2005ರಲ್ಲಿ ಕರ್ನಾಟಕ ರಾಜ್ಯ ಸಿದ್ಧಪಡಿಸಿತ್ತು. ಈ ಹಿಂದೆ 2015ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲಾಗಿತ್ತು. ಈಗ 2025ರಲ್ಲಿ ಸಿದ್ಧಪಡಿಸಲಾಗುತ್ತಿದೆ. ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ 0.629 ಇದೆ. ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕ 0.644 ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಪಿ.ಪ್ರಭುಸ್ವಾಮಿ, ಪ್ರಾಧ್ಯಾಪಕರಾದ ಡಾ. ನವಿತಾ ತಿಮ್ಮಯ್ಯ ಹಾಗೂ ಇತರರು ಇದ್ದರು.