ಕಾರ್ಮಿಕ ಸಂಘಟನೆಗಳ ಮುಷ್ಕರದ ಅಂಗವಾಗಿ ಮೈಸೂರು ನಗರದಲ್ಲಿ ಗುರುವಾರ ಮೆರವಣಿಗೆ ನಡೆಯಿತು.
ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾರ್ಮಿಕ, ರೈತ ಮತ್ತು ದಲಿತ ಸಂಘಟನೆಗಳಿಂದ ಗುರುವಾರ ನಗರದಲ್ಲಿ ಮುಷ್ಕರ ನಡೆಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಕರೆಯ ಮೇರೆಗೆ ವಿವಿಧ ಸಂಘಟನೆಗಳ ಪ್ರಮುಖರು ಗಾಂಧಿ ವೃತ್ತದಿಂದ ಮೆರವಣಿಗೆ ಆರಂಭಿಸಿ ನಂತರ ಓಲ್ಡ್ ಬ್ಯಾಂಕ್ ರಸ್ತೆ, ನ್ಯೂ ಸಯ್ಯಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡರು.
4 ಲೇಬರ್ ಕೋಡ್ ರದ್ದುಗೊಳಿಸಬೇಕು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿ ಜಿ ರಾಮ್ ಐ ಕಾಯ್ದೆ ರದ್ದುಗೊಳಿ ಸಬೇಕು, ಭೂ ಸ್ವಾಧೀನ ಕಾಯ್ದೆ ಹಿಂಪಡೆಯಬೇಕು, ರಾಜ್ಯ ಸರ್ಕಾರ ಭೂ ಸುಧಾರಣೆ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು, ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು, ಬೀಜ ಮಸೂದೆ ಕಾಯ್ದೆ ಹಿಂಪಡೆಯಬೇಕು, ವಿಮಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.’
ಹಿರಿಯ ಕಾರ್ಮಿಕ ಮುಖಂಡ ಶೇಷಾದ್ರಿ ಮಾತನಾಡಿ, ದೇಶದ್ಯಂತ ಮುಷ್ಕರ ಯಶಸ್ವಿಯಾಗಿದೆ. ಹಲವು ರಾಜ್ಯಗಳಲ್ಲಿ ಮುಷ್ಕರ ಬಂದ್ ಹರತಾಳದ ಸ್ವರೂಪ ತೆಗೆದುಕೊಂಡಿದೆ. ದುಡಿಯುವ ಜನತೆ ಕೇಂದ್ರ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಕಾನೂನುಗಳ ತಿದ್ದುಪಡಿ ಸಂವಿಧಾನದ ಹಕ್ಕುಗಳಿಗೆ ವಿರುದ್ಧವಾಗಿದೆ. ಸಂವಿಧಾನ ಹೇಳಿರುವ ಕನಿಷ್ಠ ಕೂಲಿ ಕೊಡದಂತೆ ನೀತಿ ರೂಪಿಸಿದೆ. ದುಡಿಯುವ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಹಿಗಳು ಕಾರ್ಮಿಕರ ಶೋಷಣೆ ಮಾಡಲಿಕ್ಕೆ ಅವಕಾಶ ಕೊಡುತ್ತಿದೆ. ಇದಕ್ಕೆ ಕಾರ್ಮಿಕರು ಅವಕಾಶ ಕೊಡಬಾರದು ಎಂದರು.
ಕಾರ್ಮಿಕರ ನ್ಯಾಯಾಲಯವನ್ನು ದುರ್ಬಲಗೊಳಿಸಲಾಗಿದೆ. ಗುತ್ತಿಗೆ ಆಧಾರಿತ ನೌಕರರಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ರೈತರನ್ನು ಸಂಕಷ್ಟಕ್ಕೆ ದೂಡಲಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಲಾಗುತ್ತಿದೆ. ಬಡವರು, ಕಾರ್ಮಿಕರು ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಕಾರ್ಮಿಕರು, ರೈತರನ್ನು ಕೇವಲ ಮತದಾರರನ್ನಾಗಿ ನೋಡುತ್ತಿವೆ. ಅಧಿಕಾರಕ್ಕೆ ಬಂದ ನಂತರ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತವೆ. 874 ದಿನಗಳ ರೈತರ ಹೋರಾಟಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲಿಖಿತವಾಗಿ ಬರೆದುಕೊಟ್ಟ ಭರವಸೆಗಳು ಈಡೇರಿಸಿಲ್ಲ. ರಾಜ್ಯ ಸರ್ಕಾರ ಭೂ ಸುಧಾರಣೆ ಮತ್ತು ಎಪಿಎಂಸಿ ವಾಪಸ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಲೇಖಕ ನಾ.ದಿವಾಕರ, ಎಐಟಿಯುಸಿ ಜಗನ್ನಾಥ್, ಸಿಐಟಿಯು ಅಣ್ಣಪ್ಪ ಬಸವಯ್ಯ, ಎಐಯುಟಿಯುಸಿ ಚಂದ್ರಶೇಖರ ಮೇಟಿ, ಯಶೋಧರ, ಎಐಸಿಸಿಟಿಯು ಆನಂದ, ದಸಂಸದ ಬೆಟ್ಟಯ್ಯಕೋಟೆ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ರೈತ ಸಂಘದ ಪಿ.ಮರಂಕಯ್ಯ, ಎಕೆಕೆಎಂಸ್ ಬಸವರಾಜು, ಮಹದೇವಮ್ಮ, ಬಿ.ರವಿ, ಟಿ.ಆರ್.ಸುನಿಲ್, ದೇವದಾಸ್ ಹಾಗೂ ಇತರರು ಪಾಲ್ಗೊಂಡಿದ್ದರು.