ದಸರಾ ಮಹೋತ್ಸವಕ್ಕೆ ನವ ವಧುವಿನಂತೆ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಆವರಣ ಜಂಬೂಸವಾರಿ ಮುಗಿದ ಮರುದಿನವಾದ ಗುರುವಾರ ಕಸದ ಕೊಂಪೆಯಾಗಿತ್ತು.
ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಸಹಸ್ರಾರು ಜನ ಸೇರಿದ್ದರು. ಆ ಸಂದರ್ಭದಲ್ಲಿ ಅವರು ಬಿಸಾಡಿದ ನೀರಿನ ಬಾಟಲ್ಗಳು ಇನ್ನಿತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಆವರಣದಲ್ಲಿ ಹರಡಿಕೊಂಡಿದ್ದ ಕಸದ ರಾಶಿಯನ್ನು ಗುರುವಾರ ಪೌರಕಾರ್ಮಿಕರು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.
ಸ್ವಚ್ಛತೆಗಾಗಿ ಅರಮನೆ ಮಂಡಳಿಯಿಂದ ಹಾಗೂ ನಗರಪಾಲಿಕೆಯಿಂದ ಅನೇಕ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಮುಗಿದ ಬಳಿಕ ಬುಧವಾರ ರಾತ್ರಿಯಿಂದಲೇ ಅರಮನೆ ಆವರಣದಲ್ಲಿ ಈ ಸಿಬ್ಬಂದಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದ್ದರು. ಅರಮನೆ ಆವರಣದಲ್ಲಿ ಅಳವಡಿಸಿದ್ದ ಪೆಂಡಾಲ್, ಕುರ್ಚಿ, ಮೇಜುಗಳನ್ನು ನೂರಾರು ಕಾರ್ಮಿಕರು ತೆರವುಗೊಳಿಸುವ ಕಾರ್ಯ ನಡೆಸಿದರು.
ನಗರಪಾಲಿಕೆಯಿಂದ ನಿಯೋಜಿಸಿರುವ ನೂರಾರು ಪೌರಕಾರ್ಮಿಕರು ಮೆರವಣಿಗೆ ಸಾಗಿದ ಸಯ್ಯಜಿರಾವ್ ರಸ್ತೆಯಲ್ಲಿ ಬುಧವಾರ ರಾತ್ರಿಯಿಂದಲೇ ಸ್ವಚ್ಛತಾ ಕೆಲಸ ನಡೆಸಿದರು. ಈ ಮಾರ್ಗದಲ್ಲಿ ಅನೇಕ ಗುಂಪುಗಳಾಗಿ ಪೌರಕಾರ್ಮಿಕರು, ಗುರುವಾರ ಸಂಜೆವರೆಗೂ ಕಸ ವಿಲೇವಾರಿ ಕಾರ್ಯ ನಡೆಸಿದರು. ಪಂಜಿನ ಕವಾಯತು ಕಾರ್ಯಕ್ರಮ ನಡೆದ ಬನ್ನಿಮಂಟಪದ ಕವಾಯತು ಮೈದಾನದಲ್ಲೂ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಅರಮನೆ ಆವರಣ, ಪಂಜಿನ ಕವಾಯತು ಮೈದಾನ ಹಾಗೂ ದಸರಾ ಜಂಬೂಸವಾರಿ ಸಾಗಿದ ಮಾರ್ಗದುದ್ದಕ್ಕೂ ಪ್ಲಾಸ್ಟಿಕ್ ಬಾಟಲ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅರಮನೆ ಅಂಗಳದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬಂತು.
ಸ್ವಚ್ಛಗೊಳಿಸಿದ ವಶಿಷ್ಠ!
ದಸರಾ ಮಹೋತ್ಸವದ ಬಳಿಕ ಗುರುವಾರ ಅರಮನೆ ಅಂಗಳದಲ್ಲಿ ನಟ ವಶಿಷ್ಠ ಸಿಂಹ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು. ಅರಮನೆ ಆವರಣದಲ್ಲಿ
ಕಸ ಗುಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಅವರ ನಡೆ ಸಾರ್ವಜನಿಕರ ಗಮನ ಸೆಳೆಯಿತು.