ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎನ್.ಕೆ.ದೇವದಾಸ್, ಎಚ್.ಬಿ.ರಾಮಕೃಷ್ಣ, ಸೋಮರಾಜೇಅರಸ್, ರಾಮು ಇನ್ನಿತರರಿದ್ದರು. 
ಮೈಸೂರು

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿ
  • ಎಐಟಿಯುಸಿ ಪ್ರತಿಭಟನೆ
  • ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸಲು ಆಗ್ರಹ
ಮೈಸೂರು: ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸಬೇಕು. ತುಟ್ಟಿಭತ್ಯೆ ಹೆಚ್ಚಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ವತಿಯಿಂದ ನಗರದ ಕಾರ್ಮಿಕ ಇಲಾಖೆಯ ಕಚೇರಿ ಎದುರು  ಪ್ರತಿಭಟನೆ ನಡೆಯಿತು.
ಕನಿಷ್ಠ ವೇತನ ಎಂಬುದು ದಾನವಲ್ಲ, ಅದು ಕಾರ್ಮಿಕನ ಶ್ರಮದ ಘನತೆ ಕಾಪಾಡುವ ಸಂವಿಧಾನಿಕ ಹಕ್ಕು. 1992ರಲ್ಲಿ ಸುಪ್ರೀಂಕೋರ್ಟ್ ಸಹ ಕನಿಷ್ಠ ವೇತನವು ಬದುಕಲು ಪೂರಕವಾದ ವೇತನ ಆಗಿರಬೇಕು ಎಂದು ಮಹತ್ವದ ತೀರ್ಪು ನೀಡಿದೆ.
 ಕುಟುಂಬವೊಂದು ಬದುಕು ನಡೆಸಲು ಅವಶ್ಯಕವಾದ ಆಹಾರ, ಉಡುಪು, ವಸತಿ, ಶಿಕ್ಷಣ, ಆರೋಗ್ಯ ಇತ್ಯಾದಿಗೆ ಅಗತ್ಯವಾದಷ್ಟು ವೇತನ ದೊರೆಯಬೇಕೆಂದು ವೈಜ್ಞಾನಿಕ ಮಾರ್ಗಸೂಚಿ ನೀಡಿದೆ. ದುಡಿಯುವ ಪ್ರತಿಯೊಬ್ಬರಿಗೆ 2700 ಕ್ಯಾಲರಿ ಪೌಷ್ಟಿಕಾಂಶ, ವರ್ಷಕ್ಕೆ ಇಡೀ ಕುಟುಂಬಕ್ಕೆ 72 ಗಜಬಟ್ಟೆ, ಮನೆ ಬಾಡಿಗೆ, ಇಂಧನ ಮತ್ತು ಬೆಳಕಿನ ವ್ಯವಸ್ಥೆಗಾಗಿ ಶೇ.20ರಷ್ಟು ಹಾಗೂ ಮಕ್ಕಳ ಶಿಕ್ಷಣ ವೈದ್ಯಕೀಯ ಅವಶ್ಯಕತೆಗಳಿಗಾಗಿ ಶೇ.25ರಷ್ಟು ಸಂಭಾವನೆಯೂ ಕನಿಷ್ಠ ವೇತನದಲ್ಲಿ ಒಳಗೊಂಡಿರಬೇಕೆಂದು ನ್ಯಾಯಾಲಯವು ಸೂಚಿಸಿದೆ.
ಈ ಪ್ರಮಾಣದ ವೇತನವನ್ನು ನೀಡಲಾಗದ ಯಾವುದೇ ಉದ್ಯಮವೂ ಅಸ್ತಿತ್ವದಲ್ಲಿರುವ ಹಕ್ಕು ಇಲ್ಲವೆಂದು ಸ್ಪಷ್ಟಪಡಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ರಾಜ್ಯದ 1.77 ಕೋಟಿ ಕಾರ್ಮಿಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆಗೆ ಹಣದ ಹರಿವನ್ನು ಉಂಟು ಮಾಡುವ ಬಗ್ಗೆ ಗಮನಹರಿಸಬೇಕಾಗಿದೆ. ಕಾರ್ಮಿಕನೊಬ್ಬ ಹೆಚ್ಚು ಸಂಪಾದಿಸಿದಾಗ ಅವನು ಸ್ಥಳೀಯ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಾನೆ. ಇದು ಕೈಗಾರಿಕಾ ಉತ್ಪಾದನೆ ಪುನಶ್ಚೇತನಗೊಳಿಸುತ್ತದೆ. ಆರ್ಥಿಕ ಚಲನಶೀಲತೆ ಹೆಚ್ಚಿಸುತ್ತದೆ. 
ಈ ದಿಸೆಯಲ್ಲಿ ಕನಿಷ್ಠವೇತನ ಪರಿಷ್ಕರಣೆಯು ಕಾರ್ಮಿಕ ವರ್ಗಕ್ಕೆ ಸಂಬಂಧಿಸಿದ ದೊಡ್ಡ ಆರ್ಥಿಕ ಸುಧಾರಣಾ ಕ್ರಮವಾಗಿದೆ ಎಂದು ಹೇಳಿದರು.
ಕನಿಷ್ಠ ವೇತನ ಪರಿಷ್ಕರಣೆಯ ಮೂಲಕ 1.77 ಕೋಟಿಗೂ ಹೆಚ್ಚು ಕುಟುಂಬಗಳು ಘನತೆ ಮತ್ತು ಗೌರವಯುತ ಜೀವನ ನಡೆಸಲು ಸಹಕಾರಿಯಾಗಲಿದೆ. ಕಾರ್ಮಿಕ ಕಾನೂನುಗಳ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಕಡ್ಡಾಯ. ಆದರೆ, ರಾಜ್ಯ ಸರ್ಕಾರ ತನ್ನ ಶಾಸನಬದ್ಧ ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಕಳೆದ 9 ವರ್ಷಗಳಿಂದ ವೇತನ ಪರಿಷ್ಕರಣೆ ಮಾಡದೆ ವಿಳಂಬ ನೀತಿ ಅನುರಿಸುತ್ತಿರುವುದು ಸಂವಿಧಾನದ ವಿಧಿ 23ರ ಅಡಿಯಲ್ಲಿ ಒಬ್ಬ ಕಾರ್ಮಿಕನಿಗೆ ದೊರೆಯಬೇಕಾದ ಮೂಲಭೂತ ಹಕ್ಕುಗಳ ನಿರಾಕರಣೆ ಮಾಡಿದಂತಾಗುತ್ತದೆ. ಪ್ರಸ್ತುತ ಜೀವನಾವಶ್ಯಕ ವಸ್ತುಗಳು ವಿಪರೀತವಾಗಿ ಏರುತ್ತಿದ್ದರೂ ದುಡಿಯುವ ಜನರ ವೇತನ ಮಾತ್ರ ಹೆಚ್ಚಾಗದೆ ಬಡತನದ ಬದುಕು ಸಾಗಿಸುವಂತಹದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬೇಡಿಕೆಗಳು ಏನು?

2025ರ ಏಪ್ರಿಲ್ 11ರ ಕರಡು ಕನಿಷ್ಠ ಕೂಲಿ ಅಧಿಸೂಚನೆಯನ್ನು ಕೂಡಲೇ ಅಂತಿಮ ಅಧಿಸೂಚನೆಯಾಗಿ ಪ್ರಕಟಿಸಬೇಕು. ಮೂರು ವರ್ಷಗಳ ವಿಳಂಬವನ್ನು ಸರಿದೂಗಿಸಲು ಪರಿಷ್ಕರಣೆಯು 2022ರಿಂದ ಪೂರ್ವಾನ್ವಯವಾಗಿ ಜಾರಿಗೊಳಿಸಬೇಕು. ತುಟ್ಟಿಭತ್ಯೆ (ಡಿಎ) ದರವನ್ನು ಪ್ರತಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಪಾಯಿಂಟ್ 8 ಪೈಸೆಗೆ ಹೆಚ್ಚಿಸಬೇಕು. 
ಸುಪ್ರೀಂಕೋರ್ಟ್ ಮಾನದಂಡಗಳ ಪ್ರಕಾರ ಕ್ಯಾಲರಿ ಸೇವನೆಯನ್ನು ಪ್ರಸ್ತಾವಿತ 2321.4 ಕ್ಯಾಲರಿಗಳ ಬದಲಿಗೆ 2700 ಕ್ಯಾಲರಿಗೆ ಹೆಚ್ಚಿಸಬೇಕು. ಗಾರ್ಮೆಂಟ್ಸ್, ಬೀಡಿ, ಅಗರಬತ್ತಿ, ಪ್ಲಾಂಟೇಷನ್ ವಲಯಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಶೇ.40ರಷ್ಟು ವೇತನ ಅಸಮಾನತೆ ಏಕರೂಪದ ಅಧಿಸೂಚನೆಯ ಮೂಲಕ ತಾರತಮ್ಯ ಅಂತ್ಯಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎನ್.ಕೆ.ದೇವದಾಸ್, ಎಚ್.ಆರ್.ಶೇಷಾದ್ರಿ, ಎಚ್.ಬಿ.ರಾಮಕೃಷ್ಣ, ಸೋಮರಾಜೇಅರಸ್, ರಾಮು ಇನ್ನಿತರರಿದ್ದರು.