ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಬಲವರ್ಧನೆ ಹಾಗೂ ಜೀವವೈವಿಧ್ಯ ಸಂಘಟನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿ.ಕೃಷ್ಣ, ಪ್ರಸನ್ನ, ಸುರೇಶ್ ಇತರರಿದ್ದರು. 
ಮೈಸೂರು

ಜೀವವೈವಿಧ್ಯ ಸಂರಕ್ಷಣೆಗೆ ಶ್ರಮಿಸಿ

ಅವಿನಾಶ್ ಜೈನಹಳ್ಳಿ

ಭೂಮಿಯ ಮೇಲಿನ ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಾಣು ಜೀವಿಗಳ ವೈವಿಧ್ಯ ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ ಹೇಳಿದರು.

ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಬಲವರ್ಧನೆ ಹಾಗೂ ಜೀವವೈವಿಧ್ಯ ಸಂಘಟನೆ ಕುರಿತು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಸರದ ಸಮತೋಲನ ಕಾಪಾಡಲು, ಶುದ್ಧ ಗಾಳಿ ಮತ್ತು ನೀರಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಜೀವವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಜೀವಸಂಕುಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಕ್ರಮ ಬಳಕೆ ತಡೆಗಟ್ಟಿ:

ಕರ್ನಾಟಕ ಜೀವವೈವಿಧ್ಯ ಮಂಡಳಿ ತಾಂತ್ರಿಕ ಕಾರ್ಯನಿರ್ವಾಹಕ ಪ್ರಸನ್ನ ಮಾತನಾಡಿ, ಜೈವಿಕ ಸಂಪನ್ಮೂಲಗಳ ಅಕ್ರಮ ಬಳಕೆ ತಡೆಗಟ್ಟುವಲ್ಲಿ ಮುತುವರ್ಜಿ ವಹಿಸಿ ಎಂದರು.
ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ಜೈವಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಕಾನೂನುಬದ್ಧ ಸಂಸ್ಥೆಗಳಾಗಿದ್ದು, ಮಹತ್ವದ ಜವಾಬ್ದಾರಿ ಹೊಂದಿವೆ ಎಂದು ತಿಳಿಸಿದರು.
ಮಾನವ ಆರೋಗ್ಯ ಮತ್ತು ಜೀವವೈವಿಧ್ಯ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಪರಿಸರವನ್ನು ಕಲುಷಿತ ಗೊಳಿಸದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸುರೇಶ್, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಆಡಳಿತಾಧಿಕಾರಿಗಳು, ಜೀವವೈವಿಧ್ಯ ನಿರ್ವಹಣಾ ಸಮಿತಿ (ಬಿಎಂಸಿ) ಸದಸ್ಯರು ಇದ್ದರು.